ನೆಲಮಂಗಲ:- ಮನೆಯ ಮುಂದೆ ರಸ್ತೆ ಮೇಲೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲದ ಟಿ ಬಿ ಸ್ಟಾಪ್ ಬಳಿಯ ಸುಭಾಷ್ ನಗರದ ತಿರುವಿನಲ್ಲಿ ವೇಗವಾಗಿ ಬಂದ ಮಾರುತಿ ಎಟ್ರಿಕಾ ಕಾರು ನಿಯಂತ್ರಣ ತಪ್ಪಿ ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ದಕ್ಷಿತ್ ಎಂಬ ಮಗುವಿನ ಮೇಲೆ ಹರಿದಿದ್ದು, ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಮಗುವಿನ ಚೀರಾಟ ಕೇಳಿದ ಮನೆಮಂದಿ ಮತ್ತು ನೆರೆಹೊರೆಯವರು ಕಂಗಾಲಾಗಿದ್ದು, ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ.
ಚಾಲಕ ಬೇಜವಬ್ದಾರಿಯಿಂದ ಕಾರು ಚಲಾಯಿಸಿದ್ದೇ ಈ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ದಕ್ಷಿತ್‌ನ ತಲೆ, ಮುಖ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಚ್ಚರಿಯೆಂಬಂತೆ ಮಗು ಸಾವಿನ ಅಂಚಿನಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.


