ಚಿಕ್ಕಬಳ್ಳಾಪುರ:- ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಒಂದೆಡೆ ಹುಲಿ ಕಾಟ ಹೆಚ್ಚಾಗಿದ್ದರೆ, ಇನ್ನೊಂದೆಡೆ ಚಿಕ್ಕಬಳ್ಳಾಪುರದಲ್ಲಿ ಚಿರತೆ ಕಾಟ ಶುರುವಾಗಿದೆ.
ಚಿಕ್ಕಬಳ್ಳಾಪುರ ನಗರ ಹೊರವಲಯದ ಬಳಿ ಚಿರತೆಗಳ ಹಿಂಡೇ ಕಾಣಿಸಿಕೊಂಡಿದೆ. ಈ ಚಿರತೆಗಳು ಗ್ರಾಮದಲ್ಲಿನ ಹಸು, ನಾಯಿಗಳನ್ನು ಬೇಟೆಯಾಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ನಂದಿಬೆಟ್ಟ, ಸ್ಕಂದಗಿರಿ ಸೇರಿ ಹಲವು ಬೆಟ್ಟಗುಡ್ಡಗಳಿಂದ ಕೂಡಿರುವ ಈ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ವಿರಳ. ಹೀಗಿರುವಾಗ ಭಾನುವಾರ ತಿಪ್ಪೇನಹಳ್ಳಿ ಗ್ರಾಮದ ಕಲ್ಲು ಬಂಡೆಗಳ ಮೇಲೆ ಚಿರತೆಗಳು ಕಾಣಿಸಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ಚಿರತೆಗಳ ಹಿಂಡು ಬೀಡುಬಿಟ್ಟಿದ್ದು, ಪ್ರತಿದಿನ ಒಂದೊಂದು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ.
ಚಿರತೆಗಳು ನಗರದ ಹಲವೆಡೆ ನಾಯಿಗಳು, ಹಸು, ನವಿಲುಗಳನ್ನು ಬೇಟೆಯಾಡಿದ್ದು, ಇದರಿಂದ ರೈತರು ತಮ್ಮ ತೋಟಗಳಿಗೆ ಹೋಗಲೂ ಹಿಂದೇಟು ಹಾಕುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆಗಳು ಮನುಷ್ಯರನ್ನು ಕಂಡರೆ ಭಯ ಬೀಳುತ್ತವೆ. ಯಾರೂ ಹೆದರುವ ಅವಶ್ಯಕತೆಯಿಲ್ಲ. ಚಿರತೆಗಳು ಕಾಣಿಸಿದರೆ ಏನು ಮಾಡಬೇಡಿ, ನಮಗೆ ತಿಳಿಸಿ ಎಂದಿದ್ದಾರೆ. ಆದ್ರೆ ರೈತರು ಹಾಗೂ ಸಾರ್ವಜನಿಕರು ಭಯದಲ್ಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.



