- ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿಕೆ
ವಿಜಯಸಾಕ್ಷಿ ಸುದ್ದಿ, ಕಲಬುರಗಿ
ಕಲಬುರಗಿ ಜನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದುರಾಳಿತಕ್ಕೆ ಬೇಸತ್ತಿದ್ದಾರೆ. ಪಾಲಿಕೆ ಚುನಾವಣೆ ಮೂಲಕವೇ ಬಿಜೆಪಿಯ ಅವನತಿ ಶುರುವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಸರ್ಕಾರ ಕಾರ್ಮಿಕರು ಮತ್ತು ಶೋಷಿತರ ಮೇಲೆ ಗದಾಪ್ರಹಾರ ಮಾಡುತ್ತಿದೆ. ಸರ್ಕಾರದ ತಪ್ಪು ನೀತಿಗಳಿಂದ ಜನರು ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ.
ಸ್ವರ್ಗವನ್ನೇ ಧರೆಗೆ ತರ್ತಿವಿ ಎಂದು ಹೇಳಿದ್ದ ಬಿಜೆಪಿ ಇದೀಗ ನರಕ ಸೃಷ್ಟಿಸಿದೆ ಎಂದು ಆರೋಪಿಸಿದ ಅವರು, ಬಿಜೆಪಿಯ ಅವನತಿ ಕಲ್ಯಾಣ ಕರ್ನಾಟಕ ಭಾಗದಿಂದಲೇ ಆರಂಭವಾಗಲಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಮತ್ತು ದಿ. ಎನ್. ಧರ್ಮಸಿಂಗ್ ಈ ಭಾಗಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ
ಮತ ಕೇಳುವ ನೈತಿಕ ಹಕ್ಕನ್ನು ಬಿಜೆಪಿ ಸಂಪೂರ್ಣ ಕಳೆದುಕೊಂಡಿದೆ. ಜಾತ್ಯತೀತತೆ ಬಗ್ಗೆ ಮಾತನಾಡುವ ಜೆಡಿಎಸ್ ಜಾತಿ ರಾಜಕಾರಣದ ಮೊರೆ ಹೋಗಿದೆ. ಅಧಿಕಾರಕ್ಕಾಗಿ ಜೆಡಿಎಸ್ ಯಾರ ಜೊತೆಯಾದರೂ ಹೋಗಲು ಸಿದ್ಧವಿದೆ ಎಂದು ಟೀಕಿಸಿದರು.
ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಸವಕಲ್ಯಾಣದ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್, ಬಿಜೆಪಿ ಸರ್ಕಾರ ತನ್ನ ಸಾಧನೆ ಎಂದು ಚುನಾವಣೆ ಪ್ರಣಾಳಿಕೆಯಲ್ಲಿ ಹಾಕಿಕೊಂಡಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.

