ಮೆಕ್ಕೆಜೋಳದ ಖರೀದಿ ಕೇಂದ್ರ ಆರಂಭಕ್ಕೆ ಜಿಲ್ಲಾಡಳಿತದಿಂದ ಲಿಖಿತ ಭರವಸೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮೆಕ್ಕೆಜೋಳದ ಖರೀದಿ ಕೇಂದ್ರವನ್ನು ಪ್ರಾರಂಭಿಸುವುದಾಗಿ ಜಿಲ್ಲಾಡಳಿತ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಮಗ್ರ ರೈತ ಸಂಘಟನೆಗಳ ಒಕ್ಕೂಟ ಮತ್ತು ಅನೇಕ ಸಂಘಟನೆಗಳು, ಮಠಾಧೀಶರು, ರೈತರು, ಮಹಿಳೆಯರನ್ನೊಳಗೊಂಡು ಪಟ್ಟಣದಲ್ಲಿ ಸೋಮವಾರ ವಿಜೃಂಭಣೆಯಿಂದ ಮೆರವಣಿಗೆಯೊಂದಿಗೆ ಸಂಭ್ರಮ ಆಚರಿಸಲಾಯಿತು.

Advertisement

ಈ ಕುರಿತು ವಿವರಣೆ ನೀಡಿದ ಹೋರಾಟ ವೇದಿಕೆಯ ಮುಖಂಡ ಮಂಜನಾಥ ಮಾಗಡಿ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ನ. 15ರಿಂದ ತಾಲೂಕಿನ ಎಲ್ಲ ರೈತ ಸಂಘಟನೆಗಳ ಒಕ್ಕೂಟ, ಮಠಾಧೀಶರು, ವಿವಿಧ ಕನ್ನಡಪರ ಸಂಘಟನೆ, ವ್ಯಾಪಾರಸ್ಥರು, ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಪಕ್ಷಾತೀತ, ಜಾತ್ಯಾತೀತವಾಗಿ ಹೋಮ, ಧೀಡನಮಸ್ಕಾರ, ದೇವರಿಕೆ ಹರಕೆ, ಭಜನೆ, ಪ್ರಾರ್ಥನೆ, ಸಲ್ಲೇಖನ ವೃತದಂಥಹ ಶಾಂತ ರೀತಿಯ ಹೋರಾಟ ಮಾಡಲಾಯಿತು. ಹೋರಾಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲಾಡಳಿತ, ತಾಲೂಕಾಡಳಿತ ಸಂಪೂರ್ಣ ಬೆಂಬಲ ನೀಡಿತು. ಲಕ್ಷ್ಮೇಶ್ವರದ ರೈತರ ಹೋರಾಟದ ಫಲವಾಗಿ ಸರ್ಕಾರ ರಾಜ್ಯಾದ್ಯಂತ ಖರೀದಿ ಕೇಂದ್ರ ಪ್ರಾರಂಭಿಸುವ ಆದೇಶವನ್ನೂ ಹೊರಡಿಸಿತು. ಆದೇಶದಲ್ಲಿ ಲಕ್ಷ್ಮೇಶ್ವರದ ಹೆಸರು ಕೈಬಿಟ್ಟಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ ಜಿಲ್ಲಾಡಳಿತ ಜಿಲ್ಲಾ ಟಾಸ್ಕ್ಫೋರ್ಸ್ ಸಭೆಯಲ್ಲಿ, ಲಕ್ಷ್ಮೇಶ್ವರದಲ್ಲಿಯೇ ಖರೀದಿ ಕೇಂದ್ರ ಪ್ರಾರಂಭಿಸುವ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿಜಯೋತ್ಸವ, ಹರಕೆ ತೀರಿಸುವುದು, ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಮೆರವಣಿಗೆಯಲ್ಲಿ ಸುಜಾತಾ ದೊಡ್ಡಮನಿ, ರವಿಕಾಂತ ಅಂಗಡಿ, ಎಂ.ಎಸ್. ದೊಡ್ಡಗೌಡರ, ಬಸಣ್ಣ ಬೆಂಡಿಗೇರಿ, ಟಾಕಪ್ಪ ಸಾತಪುತೆ, ಶಿವಾನಂದ ಲಿಂಗಶೆಟ್ಟಿ, ದಾದಾಪೀರ ಮುಚ್ಚಾಲೆ, ಕಾಶಪ್ಪ ಮುಳಗುಂದ, ಗಂಗಾಧರ ಖರಾಟೆ, ಪೂರ್ಣಾಜಿ ಖರಾಟೆ, ಮಲ್ಲಿಕಾರ್ಜುನ ನೀರಾಲೋಟಿ, ಮಹೇಶ ಹೊಗೆಸೊಪ್ಪಿನ, ಪ್ರಕಾಶ ಬಳಿಗಾರ, ಸುರೇಶ ಹಟ್ಟಿ, ಬಿ.ಎಸ್. ಜಾಲಗಾರ, ಶಿವನಗೌಡ್ರ ಅಡರಕಟ್ಟಿ, ಶರಣಪ್ಪ ಕಾತರಕಿ, ಎಂ.ಆಯ್. ಮುಳಗುಂದ, ಪ್ರಕಾಶ ಕೊಂಚಿಗೇರಿಮಠ, ಮುದಕಣ್ಣ ಗದ್ದಿ, ಸುರೇಶ ಹಿರೇಮನಿ, ನೀಲಪ್ಪ ಶರಸೂರಿ, ಮಂಜುನಾಥ ಮುಳಗುಂದ, ಮಲ್ಲೇಶಪ್ಪ ನೆಲಗುಡ್ಡದ, ಗುರಪ್ಪ ಮುಳಗುಂದ, ಪವನ ಬಂಕಾಪುರ, ಭಾಷಾಸಾಬ ಮೂಮಿನ, ಬಸಣ್ಣ ಟೋಕಾಳಿ, ಬಸವರಾಜ ಶಿರಹಟ್ಟಿ, ನೀಲಪ್ಪ ಮಾಗಡಿ, ಅಶೋಕ ತೋಟದ, ಮುತ್ತು ನೀರಲಗಿ, ಮಂಜನಗೌಡ ದೊಡ್ಡಗೌಡರ ಸೇರಿ ಮಹಿಳೆಯರು, ರೈತರು ಪಾಲ್ಗೊಂಡಿದ್ದರು.

ಬೆಳಿಗ್ಗೆ ಪಟ್ಟಣದ ಶಿಗ್ಲಿ ನಾಕಾದ ರೈತ ಹೋರಾಟ ವೇದಿಕೆಯಿಂದ ಲಕ್ಷ್ಮೇಶ್ವರದ ಮಳೇಮಲ್ಲಿಕಾರ್ಜುನ ಶಿವಾಚಾರ್ಯರು, ಹೂವಿನಶಿಗ್ಲಿ ಶ್ರೀ ಚನ್ನವೀರಮಹಾಸ್ವಾಮಿಗಳು, ಆದ್ರಳ್ಳಿ ಗವಿಮಠದ ಶ್ರೀ ಕುಮಾರ ಮಹಾರಾಜರು, ಕುಂದಗೋಳ ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರು, ಬಟಗುರ್ಕಿ ಶ್ರೀಗಳ ಸಾನಿಧ್ಯದಲ್ಲಿ ಅಲಂಕೃತ ಎತ್ತಿನ ಚಕ್ಕಡಿ, ಡೊಳ್ಳು, ಭಜನೆ, ಮಹಿಳೆಯರ ಆರತಿ, ಕುದುರೆಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಹೊಸ ಬಸ್ ನಿಲ್ದಾಣದ ಮೂಲಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ದೂದಪೀರಾಂ ದರ್ಗಾದಲ್ಲಿ ಪ್ರಾರ್ಥನೆ, ಹಾವಳಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಧರಣಿ ಸ್ಥಳಕ್ಕೆ ಬರಲಾಯಿತು.


Spread the love

LEAVE A REPLY

Please enter your comment!
Please enter your name here