ವಿಶೇಷ ಮಕ್ಕಳು ಮುಖ್ಯ ವಾಹಿನಿಗೆ ಬರಲಿ: ಆರ್.ವಿ. ಶೆಟ್ಟೆಪ್ಪನವರ 

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿಶೇಷ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರವು ವಿಶೇಷ ಚೇತನರ ಉಚಿತ ವೈದ್ಯಕೀಯ ತಪಾಸಣೆ ನಡೆಸಿ ಸಾಧನಾ ಸಲಕರಣೆಗಳನ್ನು ಒದಗಿಸಿ, ಈ ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಗದಗ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶೆಟ್ಟೆಪ್ಪನವರ ಹೇಳಿದರು.

Advertisement

ಅವರು ಗದಗ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಜರುಗಿದ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಜ್ಞವೈದ್ಯರ ತಂಡದಿಂದ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಂಗವೈಕಲ್ಯದ ಪ್ರಕಾರ, ಅದರ ಸ್ವರೂಪ ಹಾಗೂ ಪ್ರಮಾಣವನ್ನು ಗುರುತಿಸಿ ಅಗತ್ಯವಿರುವ ಸಾಧನ-ಸಲಕರಣೆಗಳನ್ನು ನಿರ್ಧರಿಸಲು ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಎ.ಎಲ್.ಎಂ.ಸಿ.ಓ ಸಂಸ್ಥೆಯವರು ಅಗತ್ಯವಿರುವ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಸಲಕರಣೆಗಳನ್ನು ವಿತರಿಸುವರು. ಇದರ ಸದುಪಯೋಗವನ್ನು ಅಗತ್ಯವುಳ್ಳವರು ಪಡೆದುಕೊಳ್ಳಬೇಕು ಎಂದರು.

ಗದಗ ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯದ ಎ.ಪಿ.ಸಿ.ಓ ಶಿವಕುಮಾರ ಕುರಿ ಮಾತನಾಡಿ, ಅಂಗವೈಕಲ್ಯತೆ ಎಂಬುದು ಶಾಪವಲ್ಲ. ಸಾಧನೆ ಮಾಡಲು ವಿಶೇಷ ಅಗತ್ಯವುಳ್ಳವರಿಗೆ ಪ್ರೋತ್ಸಾಹ ಹಾಗೂ ಸಹಕಾರ ಬೇಕಾಗಿದ್ದು, ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ, ವಿಕಲಚೇತನರು ಸಾಧನೆಯ ಹಾದಿಯಲ್ಲಿ ಸಾಗಿದವರು. ಗೃಹ ಆಧಾರಿತ ಮಕ್ಕಳಿಗೆ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು. ಆದಷ್ಟು ಶಿಕ್ಷಣದ ಕಡೆಗೆ ಮಕ್ಕಳು ಬರುವಂತೆ ಪ್ರೇರಣೆ ನೀಡಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವಂತೆ ನಾವೆಲ್ಲರೂ ಅವರಿಗೆ ಆಸರೆಯಾಗಬೇಕು ಎಂದರು.

ವೇದಿಕೆಯ ಮೇಲೆ ಎ.ಎಲ್.ಐ.ಎಮ್.ಸಿ.ಓ ಸಂಸ್ಥೆಯ ನುರಿತ ವೈದ್ಯರು, ಮುಖ್ಯೋಪಾಧ್ಯಾಯ ಎಸ್.ಜೆ. ನಮಾಜಿ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸುನೀತಾ ತಿಮ್ಮನಗೌಡ್ರ, ಶ್ರೀಮತಿ ಕಟಗಿ ಪ್ರಾರ್ಥಿಸಿದರು, ಸಂಪನ್ಮೂಲ ವ್ಯಕ್ತಿ ಇ.ಡಿ. ಹುಗ್ಗೇನವರ ಸ್ವಾಗತಿಸಿದರು. ಶ್ಯಾಮ ಲಾಂಡೆ ನಿರೂಪಿಸಿದರು. ಎಸ್.ಸಿ. ಚಳಗೇರಿ ವಂದಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಗದಗ ನಗರ ಸಮನ್ವಯ ಕೇಂದ್ರದ ಸಮನ್ವಯಾಧಿಕಾರಿ ಎಸ್.ಪಿ. ಪ್ರಭಯ್ಯನಮಠ ಮಾತನಾಡಿ, ವಿಕಲಚೇತನರು ಸಾಧನೆ ಮಾಡಬಲ್ಲರು. ಅವರಿಗೆ ಎಲ್ಲ ರೀತಿಯ ಸಹಕಾರದ ಅವಶ್ಯಕತೆಯಿದೆ. ತಂದೆ-ತಾಯಿಯಿಂದ ಇಂತಹ ಮಕ್ಕಳ ಬಗೆಗೆ ಚಿಂತಿಸದೇ ಮುಖ್ಯವಾಹಿನಿಗೆ ತರುವತ್ತ ಗಮನ ಹರಿಸಬೇಕು ಎಂದರು.


Spread the love

LEAVE A REPLY

Please enter your comment!
Please enter your name here