ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: 17 ದಿನಗಳ ರೈತರ ದೀರ್ಘ ಹೋರಾಟಕ್ಕೆ ಮಣಿದಿದ್ದ ಸರಕಾರ ಸೋಮವಾರ ಖರೀದಿ ಕೇಂದ್ರವನ್ನು ಸಾಂಕೇತಿಕವಾಗಿ ಉದ್ಘಾಟನೆಗೊಳಿಸುವ ಆದೇಶಪ್ರತಿ ನೀಡಿತ್ತು. ಆದರೆ, ಸರ್ಕಾರಿ ಆದೇಶದ ಹಿನ್ನೆಲೆ ಸೋಮವಾರ ಖರೀದಿ ಕೇಂದ್ರ ಪ್ರಾರಂಭವಾಗುವ ನಿರೀಕ್ಷೆಯಲ್ಲಿರುವ ರೈತರು ಮಧ್ಯಾಹ್ನವಾದರೂ ಸಹ ಖರೀದಿ ಕೇಂದ್ರ ಪ್ರಾರಂಭವಾಗದಿರುವ ಹಿನ್ನೆಲೆಯಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನದ ಒಳಗಾಗಿ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟಿಸುವ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಉತ್ಸಾಹದಿಂದ ಪಾಲ್ಗೊಂಡಿದ್ದ ಸಾವಿರಾರು ರೈತರು ಮಧ್ಯಾಹ್ನ ಮೂವರೆಯಾಗುತ್ತಾ ಬಂದಿದ್ದರೂ ಪ್ರಾರಂಭಕ್ಕೆ ವಿಳಂಬವಾಗುತ್ತಿರುವುದನ್ನು ಗಮನಿಸಿ, ಟೈರ್‌ಗೆ ಬೆಂಕಿ ಹಚ್ಚಿ ಸರಕಾರ ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 17 ದಿನಗಳಿಂದ ರೈತರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸತ್ಯಾಗ್ರಹ ವೇದಿಕೆಯಲ್ಲಿಯೇ ಸಾಂಕೇತಿಕವಾಗಿ ಖರೀದಿ ಕೇಂದ್ರವನ್ನು ಪ್ರಾರಂಭಿಸುವುದಾಗಿ ಜಿಲ್ಲಾಧಿಕಾರಿಗಳು ಲಿಖಿತ ಭರವಸೆ ನೀಡಿದ್ದ ಹಿನ್ನೆಲೆ ಹೋರಾಟಗಾರರು ವಿಜಯೋತ್ಸವ ಆಚರಿಸಲು ನಿರ್ಧರಿಸಿದ್ದರು. ಆದರೆ ಜಿಲ್ಲಾಧಿಕಾರಿಗಳು ಮಧ್ಯಾಹ್ನವಾದರೂ ಬಾರದೇ ಇದ್ದುದನ್ನು ಗಮನಿಸಿದ ರೈತರು ಕ್ಷಣಾರ್ಧದಲ್ಲಿ ಪಾಳಾ-ಬದಾಮಿ ರಾಜ್ಯ ಹೆದ್ದಾರಿಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು.

ಆದ್ರಳ್ಳಿ ಕುಮಾರ ಮಹಾರಾಜರು ಕಳೆದ 3 ದಿನಗಳಿಂದ ಮತ್ತೆ ಆಮರಣ ಕಠಿಣ ಉಪವಾಸ ಪ್ರಾರಂಭಿಸಿದ್ದರು. ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ಅಸ್ವಸ್ಥಗೊಂಡಾಗ ಪಿಎಸ್‌ಐ ಮತ್ತಿತರರು ಕೂಡಲೇ ಅವರನ್ನು ಎತ್ತಿಕೊಂಡು ವೇದಿಕೆಗೆ ಕರೆತಂದರು. ಆದರೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲು ಶ್ರೀಗಳು ನಿರಾಕರಿಸಿದರು.

ಈ ಸಂದರ್ಭದಲ್ಲಿ ಮಹೇಶ ಹೊಗೆಸೊಪ್ಪಿನ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ಪೂರ್ಣಾಜಿ ಖರಾಟೆ, ಶರಣು ಗೋಡಿ, ಸುರೇಶ ಹಟ್ಟಿ, ಚನ್ನಪ್ಪ ಷಣ್ಮುಖಿ, ಟಾಕಪ್ಪ ಸಾತಪುತೆ, ವಸಂತ ಕರಿಗೌಡ್ರ, ನೀಲಪ್ಪ ಶರಸೂರಿ, ರಮೇಶ ಹಂಗನಕಟ್ಟಿ ಸೇರಿದಂತೆ ನೂರಾರು ರೈತರು ಇದ್ದರು.

ಪೊಲೀಸರು ಎಷ್ಟೇ ಮನವಿ ಮಾಡಿದರೂ ಸಹ ರೈತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಅಲ್ಲದೆ ರಸ್ತೆಯಲ್ಲಿಯೇ ನಿಂತು ಊಟ ಮಾಡಿದರು. ಈ ಸಂದರ್ಭದಲ್ಲಿ ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ರವಿಕಾಂತ ಅಂಗಡಿ ಮಾತನಾಡಿ, ಖರೀದಿ ಕೇಂದ್ರ ಆಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.


Spread the love

LEAVE A REPLY

Please enter your comment!
Please enter your name here