ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಆಧ್ಯಾತ್ಮಿಕ ಪರಂಪರೆ ಬಹು ವಿಸ್ತಾರವಾದುದು. ಲೌಕಿಕ ಬದುಕಿನ ಜಂಜಡಗಳಲ್ಲಿ ಮುಳುಗಿ ಪಾರಮಾರ್ಥಿಕ ಸತ್ಯವನ್ನು ಮರೆತಿರುವುದರಿಂದ ವ್ಯಕ್ತಿಗೆ ಸುಖ, ಶಾಂತಿ, ನೆಮ್ಮದಿಗಳು ಶಾಶ್ವತವಾಗಿ ದೊರಕುತ್ತಿಲ್ಲ. ಆಧ್ಯಾತ್ಮಿಕ ಚಿಂತನೆಗಳು ಮನುಷ್ಯನನ್ನು ಉನ್ನತೀಕರಿಸಿ ಸತ್ಯದೆಡೆಗೆ ಸಾಗಲು ಪ್ರೇರೇಪಿಸುತ್ತವೆ ಎಂದು ಕ.ವಿ.ವಿ. ವಿಶ್ರಾಂತ ಕುಲಸಚಿವ ಡಾ. ಜಿ.ಬಿ. ನಂದನ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸದ್ಗುರು ಪ್ರಕಾಶನ ರಾಜೂರು ಹಾಗೂ ಬಸವೇಶ್ವರ ಪದವಿ ಮಹಾವಿದ್ಯಾಲಯದ ಸಹಯೋಗದಲ್ಲಿ ಜರುಗಿದ ರಾಮಾನಂದ ರಾಜೂರು ವಿರಚಿತ `ಸದ್ಗುರುವಿನ ಬೆರಗಿನ ಬಯಲು’ ಕೃತಿಯ ಕುರಿತು ಮಾತನಾಡಿದರು.
ಬಸವಾದಿ ಶರಣರು ಅರಿತು, ಆಚರಿಸಿದ ಬಸವ ಧರ್ಮ ಸಕಲ ಜೀವಿಗಳಿಗೆ ಮಾದರಿಯಾಗಿದೆ. ಕೃತಿಕಾರರು ಅನುಭಾವದ ನುಡಿಗಳನ್ನು ವಚನಗಳನ್ನಾಗಿ, ತತ್ವಪದಗಳನ್ನಾಗಿ ರಚಿಸಿ ಈ ಕೃತಿಯಲ್ಲಿ ನೀಡಿದ್ದಾರೆ. ಆಧ್ಯಾತ್ಮಿಕ ಚಿಂತಕರಿಗೆ ಉತೃಷ್ಟವಾದ ಕೃತಿ ಇದಾಗಿದೆ ಎಂದು ಅಭಿಪ್ರಾಯಪಟ್ಟರು.
ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ ಮಾತನಾಡಿ, ಧಾವಂತದ ಬದುಕಿನಲ್ಲಿ ಮನುಷ್ಯ ಸಂತೋಷದ ಹುಡುಕಾಟದಲ್ಲಿದ್ದಾನೆ. ಭೌತಿಕ ವಸ್ತುಗಳು ತಾತ್ಕಾಲಿಕ ಸುಖವನ್ನು ನೀಡುತ್ತವೆ. ಶಾಶ್ವತವಾದ ಆನಂದ ಆಧ್ಯಾತ್ಮಿಕ ಬದುಕಿನಲ್ಲಿದೆ. ಅಂತಹ ಬದುಕನ್ನು ಬದುಕುತ್ತಿರುವ ರಾಮಾನಂದ ರಾಜೂರ ಈ ಕೃತಿಯ ಮೂಲಕ ಉತ್ತಮ ವಿಚಾರಗಳನ್ನು ಜನಮನಕ್ಕೆ ತಿಳಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕೃತಿಕಾರ ರಾಮಾನಂದ ರಾಜೂರ ಮಾತನಾಡಿ, ನಮ್ಮ ಪೂರ್ವಜರು ಅರಿತು ಆಚರಿಸಿದ ಈ ವಿಧಾನವನ್ನು ಮುಂದುವರಿಸಿ ಆಧ್ಯಾತ್ಮಿಕ ತಳಹದಿಯ ಮೇಲೆ ಜೀವನವನ್ನು ನಡೆಸುವ ಪ್ರಯತ್ನ ಮಾಡಿದ್ದೇನೆ. ಈ ಕೃತಿ ಪ್ರಕಟಗೊಳ್ಳಲು ಹಲವರು ಸಹಾಯ-ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ವಿಶ್ರಾಂತ ಪ್ರಾಚಾರ್ಯ ಕೆ.ಆರ್. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಮಾನಂದ ರಾಜೂರರ ಲೌಕಿಕ ಮತ್ತು ಪಾರಮಾರ್ಥಿಕ ಬದುಕಿನ ಘಟ್ಟಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುತ್ತಪ್ಪ ಮುರಾಬಟ್ಟಿ, ಡಾ. ಡಿ.ಎಚ್. ಕಡದಳ್ಳಿ ಮಾತನಾಡಿದರು. ಪ್ರಾಚಾರ್ಯ ಜಿ.ಬಿ. ಗುಡಿಮನಿ, ಜಿ.ಎನ್. ಕುರ್ತಕೋಟಿ, ಎಂ.ಬಿ. ದಳಪತಿ ವೇದಿಕೆಯಲ್ಲಿದ್ದರು. ಡಾ. ಶಂಕರ ಬಿನ್ನಾಳ, ಪರಶುರಾಮ ದೊಡ್ಡಮನಿ, ಮಾರುತಿ ಬಿನ್ನಾಳ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಹನುಮಂತಪ್ಪ ದೊಡ್ಡಮನಿ ಸ್ವಾಗತಿಸಿದರು. ಡಾ. ವಿ.ವೈ. ನಾಗಮ್ಮನವರ ನಿರೂಪಿಸಿದರು. ಶಿಲ್ಪಾ ಮ್ಯಾಗೇರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಈ.ಆರ್. ಲಗಳೂರ, ಅನ್ನದಾನಿ ಹಿರೇಮಠ, ಕಿಶೋರಬಾಬು ನಾಗರಕಟ್ಟಿ, ಡಿ.ಎಸ್. ಬಾಪುರಿ, ಸತೀಶ ಚನ್ನಪ್ಪಗೌಡ್ರ, ಅಮರೇಶ ರಾಂಪೂರ, ವೀರಪ್ಪ ದೊಡ್ಡಮನಿ, ಬಿ.ಜಿ. ಗಿರಿತಿಮ್ಮಣ್ಣವರ, ಮಾರುತಿ ಬುರಡಿ, ಹೊನ್ನಪ್ಪ ತಳ್ಳಿಹಾಳ, ಮುತ್ತು ಮಾದರ, ಜಯನಗೌಡ ಪಾಟೀಲ, ಉಮಾಕಣವಿ, ರಾಜೇಶ್ವರಿ ಎಂ.ಡಿ, ಕೆ. ಸಿದ್ಧಪ್ಪ, ರಾಹುಲ ಗಿಡ್ನಂದಿ, ಸತೀಶರಾವ ಕುಲಕರ್ಣಿ, ವಿಶಾಲಕುಮಾರ ಪರದೇಶಿ, ಶಶಾಂಕ ಹಾದಿಮನಿ, ಡಾ. ರಮೇಶ ಬಿ.ಜಿ, ಸಂಜಯ ಬಾಗಮಾರ, ಶಿವಾನಂದ ಭಜಂತ್ರಿ, ಡಿ.ಬಿ. ಪೂಜಾರ, ಎಂ.ವೈ. ಹಳೆಮನಿ, ಅ.ದ. ಕಟ್ಟಿಮನಿ, ಸೈಯದ್ ಫಾರೂಕ್, ನಾಗಪ್ಪ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ವ್ಯಕ್ತಿ ತಾನಾರೆಂಬುದನ್ನು ಅರಿಯಲು ಗುರುವಿನ ಮಾರ್ಗದರ್ಶನ ಬೇಕು. ಆ ಮೂಲಕ ಸಾಧಕ ಅನೇಕ ಕ್ರಮಗಳನ್ನು ಸಾಧಿಸಿ, ಪರಬ್ರಹ್ಮ ವಸ್ತುವಿನಲ್ಲಿ ಐಕ್ಯಗೊಳ್ಳುವ ಪರಿಯನ್ನು ಭಾರತೀಯ ಆಧ್ಯಾತ್ಮಿಕ ಚಿಂತಕರು ಅನೇಕ ವಿಧಾನಗಳ ಮೂಲಕ ವಿವರಿಸಿದ್ದಾರೆ. ಈ ಹಾದಿಯಲ್ಲಿಯೇ ಕೃತಿಕಾರರು ಪಯಣಿಸಿ ತಮ್ಮ ಅನುಭವವನ್ನು ಅನುಭವವಾಗಿಸಿ ಈ ಕೃತಿಯ ಮೂಲಕ ಉಣಬಡಿಸಿದ್ದಾರೆ ಎಂದು ತಿಳಿಸಿದರು.


