ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರನಲ್ಲಿ ಕಳೆದ 18 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟದ ಪರಿಣಾಮ ಸೋಮವಾರ ರಾತ್ರಿ ಜಿಲ್ಲಾಧಿಕಾರಿಗಳು ಸರ್ಕಾರದ ನಿಯಮಾವಳಿಯಂತೆ ಮೆಕ್ಕೆಜೋಳದ ಖರೀದಿ ಕೇಂದ್ರವನ್ನು ರೈತರ ಹೋರಾಟ ವೇದಿಕೆಯಲ್ಲಿಯೇ ಸಾಂಕೇತಿಕವಾಗಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭಕ್ಕೆ ಲಕ್ಷ್ಮೇಶ್ವರದ ರೈತರು ಹೋರಾಟ ಮಾಡಿದ ಪರಿಣಾಮ ಇಡೀ ರಾಜ್ಯದ ಬೆಳೆಗಾರರಿಗೆ ಅನಕೂಲವಾಗಿದೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ತಾವು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಕೆ. ಪಾಟೀಲರಿಗೆ ರೈತರ ಸಮಸ್ಯೆ, ಬೇಡಿಕೆಯನ್ನು ತಿಳಿಸಿದಾಗ ಕೂಡಲೇ ಕಾರ್ಯಪೃವೃತ್ತರಾದ ಅವರು, ಮುಖ್ಯಮಂತ್ರಿಗಳಿಗೆ ಮನವಿ/ಒತ್ತಾಯ ಮಾಡಿ ಕೇಂದ್ರ ಪ್ರಾರಂಭಕ್ಕೆ ಬೇಕಾದ ಎಲ್ಲ ರೀತಿಯ ಪ್ರಕ್ರಿಯೆ ಪೂರ್ಣಗೊಳಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಜಿಲ್ಲೆಯಲ್ಲಿ ಖರೀದಿ ಕೇಂದ್ರ ಹಂಚಿಕೆಯಲ್ಲಿ ತಾಂತ್ರಿಕ ತೊಂದರೆಯಿಂದ ಲಕ್ಷ್ಮೇಶ್ವರದ ಹೆಸರು ಬಿಟ್ಟು ಹೋಗಿತ್ತು. ಈ ಸಮಸ್ಯೆ ಬಗೆಹರಿಸಲು ತಡವಾಗಿದ್ದರಿಂದ ಖರೀದಿ ಕೇಂದ್ರ ಚಾಲನೆಗೆ ತಡವಾಯಿತು. ಪ್ರತಿ ರೈತರಿಂದ 5 ಕ್ವಿಂಟಲ್ ಮೆಕ್ಕೆಜೋಳ ಖರೀದಿಯಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಈ ಪ್ರಮಾಣ ಹೆಚ್ಚಾಗಬೇಕೆಂದು ಎಲ್ಲ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ರೈತರ ಹೋರಾಟಕ್ಕೆ ಶಕ್ತಿಯಾಗಿ 18 ದಿನಗಳ ಸತ್ಯಾಗ್ರಹದಲ್ಲಿ 9 ದಿನಗಳ ಕಾಲ ಅನ್ನ, ನೀರು, ಔಷಧೋಪಚಾರ ತ್ಯಜಿಸಿ ಅಸ್ವಸ್ಥಗೊಂಡ ಆದ್ರಳ್ಳಿ ಕುಮಾರ ಮಹಾರಾಜ ಶ್ರೀಗಳಿಂದಲೇ ಖರೀದಿ ಕೇಂದ್ರಕ್ಕೆ ಚಾಲನೆ ಕೊಡಿಸಿದ ಜಿಲ್ಲಾಧಿಕಾರಿಗಳು, ಅವರಿಗೆ ಎಳೆನೀರು ಕೊಟ್ಟು ಹೋರಾಟವನ್ನು ತಾರ್ಕಿಕ ಅಂತ್ಯಗೊಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ, ಎಸಿ ಗಂಗಪ್ಪ ಎಂ, ತಹಸೀಲ್ದಾರ ಧನಂಜಯ ಎಂ ಸೇರಿ ಅಧಿಕಾರಿ ವರ್ಗದವರಿದ್ದರು.
ಈ ವೇಳೆ ಮಾತನಾಡಿದ ಹೋರಾಟದ ಪ್ರಮುಖರಾದ ಮಂಜುನಾಥ ಮಾಗಡಿ, ರವಿಕಾಂತ್ ಅಂಗಡಿ, 5 ಕ್ವಿಂಟಲ್ ಬದಲಾಗಿ ಒಬ್ಬ ರೈತರಿಂದ ಕನಿಷ್ಠ 40 ಕ್ವಿಂಟಲ್ ಬೆಳೆ ಖರೀದಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕು. ಈಗಾಗಗಲೇ ರೈತರಿಂದ ಕಡಿಮೆ ದರಕ್ಕೆ ಖರೀದಿಸಿ ದಲ್ಲಾಳಿಗಳು ಸಂಗ್ರಹಿಸಿಟ್ಟ ದಾಸ್ತಾನಿನ ಮೇಲೆ ನಿಗಾವಹಿಸಬೇಕು. ಇದು ರೈತರ ಸಂಘಟಿತ ಹೋರಾಟ ಮತ್ತು ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನ ಸಿಕ್ಕ ಜಯವಾಗಿದೆ. ಯಾವುದೇ ರಾಜಕಾರಣಿಗಳಿಂದ ಈಡೇರಿಸಲಾಗದ ಬೇಡಿಕೆಯನ್ನು ರೈತರು ಸಂಘಟಿತ ಹೋರಾಟದಿಂದ ಪಡೆಯಬಹುದು. ಈ ಹೋರಾಟದಲ್ಲಿ ಮಠಾಧೀಶರ, ಮಾಧ್ಯಮದವರ ಪಾತ್ರ ಮಹತ್ವದ್ದಾಗಿದೆ. 5 ಕ್ವಿಂಟಲ್ ಪ್ರಮಾಣ ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಲು ರೈತರೆಲ್ಲ ಬೆಳಗಾವಿ ಅಧಿವೇಶನಕ್ಕೆ ಹೋಗಲು ಸಿದ್ಧ ಎಂದರು.
ಖರೀದಿ ಕೇಂದ್ರ ಉದ್ಘಾಟನೆಯ ಬಳಿಕ ರೈತರ ಹೋರಾಟ ವೇದಿಕೆಯಲ್ಲಿ ಗೆಲುವಿಗೆ ಕಾರಣೀಕರ್ತರಾದ ಎಲ್ಲರನ್ನೂ ಸನ್ಮಾನಿಸಲಾಯಿತು.
ಈ ವೇಳೆ ಕುಂದಗೋಳ, ಕರೇವಾಡಿಮಠ, ಹುಲ್ಲೂರು, ಬಟಗುರ್ಕಿ ಶ್ರೀಗಳು, ಜಿ.ಎಸ್. ಗಡ್ಡದೇವರಮಠ, ಎಂ.ಎಸ್. ದೊಡ್ಡಗೌಡರ, ನಾಗರಾಜ ಚಿಂಚಲಿ, ಶರಣು ಗೋಡಿ, ಹೊನ್ನಪ್ಪ ವಡ್ಡರ, ಸುಜಾತಾ ದೊಡ್ಡಮನಿ, ಪೂರ್ಣಾಜಿ ಖರಾಟೆ, ಬಸಣ್ಣ ಬೆಂಡಿಗೇರಿ, ಮಹೇಶ ಹೊಗೆಸೊಪ್ಪಿನ, ನೀಲಪ್ಪ ಶರಸೂರಿ, ಅಮರಪ್ಪ ಗುಡಗುಂಟಿ, ಚನ್ನಪ್ಪ ಷಣ್ಮುಕಿ, ನೀಲಪ್ಪ ಶರಸೂರಿ, ದಾದಾಪೀರ್ ಮುಚ್ಛಾಲೆ, ಎಂ. ಎಂ. ಗದಗ್, ಬಿ.ಎಸ್. ಜಾಲಗಾರ, ಪುಲಕೇಶ ಬಟ್ಟೂರ, ಗುರಪ್ಪ ಮುಳಗುಂದ, ಬಸವರಾಜ ಹೊಗೆಸೊಪ್ಪಿನ, ಬಸವರಾಜ ಟೋಕಾಳಿ, ಮಂಜು ಕೋಡಳ್ಳಿ, ನಿಂಗಪ್ಪ ಹೊಂಬಳ ಸೇರಿ ನೂರಾರು ರೈತರು, ಸಂಘಟನೆಯವರು ಇದ್ದರು.
ಇಂದಿನಿಂದಲೇ ಪಟ್ಟಣದ ಟಿಎಪಿಸಿಎಂಎಸ್‌ನಲ್ಲಿ 3 ದಿನಗಳ ಕಾಲ ನೋಂದಣಿ ಮತ್ತು 4ನೇ ದಿನದಿಂದ ನೋಂದಣಿ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಜಿಲ್ಲೆಯ ಶೇ. 85ರಷ್ಟು ರೈತರಿಗೆ ಈಗಾಗಲೇ ಬೆಳೆಹಾನಿ ಪರಿಹಾರ ಜಮೆ ಮಾಡಲಾಗಿದೆ. ಹೆಸರು ಖರೀದಿಗೆ ಇದ್ದ ನಿಯಮಾವಳಿಯಲ್ಲಿಯೂ ಸಡಿಲಿಕೆಗೆ ಸಚಿವರು ಪ್ರಯತ್ನಿಸುತ್ತಿದ್ದಾರೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತದ ಎಲ್ಲ ಅಧಿಕಾರಿ ವರ್ಗ ಪ್ರಾಮಾಣಿಕವಾಗಿ ಶ್ರಮಿಸಿದೆ.
ಸಿ.ಎನ್. ಶ್ರೀಧರ್.
ಜಿಲ್ಲಾಧಿಕಾರಿಗಳು, ಗದಗ್.
ಖರೀದಿ ಕೇಂದ್ರ ಪ್ರಾರಂಭಕ್ಕೆ ಇದ್ದ ಕಾನೂನು ತೊಡಕು ನಿವಾರಣೆ ಮಾಡಿ ರೈತರಿಗೆ ಕೊಟ್ಟ ಭರವಸೆಯನ್ನು ಜಿಲ್ಲಾಡಳಿತ ಈಡೇರಿಸಿತು. 18 ದಿನಗಳ ಕಾಲ ಉಪವಾಸ ಸತ್ಯಾಗ್ರಹ, ನಿರಂತರ ಹಲವಾರು ರೀತಿಯ ಹೋರಾಟ, ನೇತೃತ್ವವಹಿಸಿದ ಆದ್ರಳ್ಳಿ ಶ್ರೀಗಳು ತಮ್ಮ ಆರೋಗ್ಯ ಸಂಪೂರ್ಣ ಅಸ್ವಸ್ಥಗೊಂಡರೂ ಬಿಡದ ಛಲ, ರೈತರ ಪಕ್ಷಾತೀತ, ಜಾತ್ಯಾತೀತ, ಒಗ್ಗಟ್ಟಿನ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.


