ಬೆಂಗಳೂರು:- ಪವರ್ ಶೇರಿಂಗ್ ಗದ್ದಲದ ನಡುವೆ ಇತ್ತೀಚೆಗಷ್ಟೇ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿತ್ತು.
ಈ ವೇಳೆ ಇಡ್ಲಿ ಸವಿದ ನಾಯಕರು ಸುಮಾರು 1 ಗಂಟೆಗಳ ಕಾಲ ಚರ್ಚೆ ನಡೆಸಿದರು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಸದಾಶಿವ ನಗರ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜನೆ ಮಾಡಿದ್ದು, ಸಿಎಂ ಅವರಿಗಾಗಿ ಡಿಕೆ ಶಿವಕುಮಾರ್ ನಾಟಿ ಕೋಳಿ ಆಹಾರ ಮಾಡಿಸ್ತಿದ್ದಾರಂತೆ. ಬ್ರೇಕ್ ಫಾಸ್ಟ್ ಮೀಟಿಂಗ್ ಹಿನ್ನೆಲೆ ಡಿಕೆಶಿ ಅವರ ಮನೆ ಮುಂದಿನ ರಸ್ತೆಯನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಬೆಳಗ್ಗೆ ಕಾವೇರಿ ನಿವಾಸದಿಂದ ಹೊರಟು ಸಿದ್ದರಾಮಯ್ಯನವರು ಡಿಕೆಶಿ ಮನೆಗೆ ಬರಲಿದ್ದಾರೆ. ಸಿಎಂಗೆ ಡಿಕೆಶಿ ಮನೆಯಲ್ಲಿ ವ್ಯವಸ್ಥೆ ಮಾಡಿದ್ದರೆ ಸಿಎಂ ಜೊತೆ ಬರುವ ಶಾಸಕರಿಗೆ ಡಿಕೆ ಸುರೇಶ್ ನಿವಾಸದಲ್ಲಿ ಉಪಹಾರ ಆಯೋಜಿಸಲಾಗಿದೆ.
ಕಳೆದ ಶನಿವಾರ ಸಿಎಂ ಕಾವೇರಿ ನಿವಾಸದಲ್ಲಿ ಡಿಸಿಎಂಗೆ ಬ್ರೇಕ್ಫಾಸ್ಟ್ ಆಯೋಜನೆ ಮಾಡಲಾಗಿತ್ತು. ಅಂದೇ ಸಿಎಂಗೂ ತಮ್ಮ ಮನೆಗೆ ಬ್ರೇಕ್ಫಾಸ್ಟ್ಗೆ ಬರುವಂತೆ ಡಿಕೆಶಿ ಆಹ್ವಾನಿಸಿದ್ದರು. ಹೀಗಾಗಿ ಇಂದು ಸಿಎಂಗೆ ಡಿಸಿಎಂ ಬ್ರೇಕ್ಫಾಸ್ಟ್ ಆತಿಥ್ಯ ಇರಲಿದ್ದು, ಸಹಜವಾಗಿ ರಾಜಕೀಯ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯನವರಿಗೆ ನಾಟಿ ಕೋಳಿ ಇಷ್ಟ ಎನ್ನುವ ಕಾರಣಕ್ಕೆ ಬೆಳಗ್ಗಿನ ತಿಂಡಿಗೆ ನಾಟಿ ಕೋಳಿ ಸಾರಿನ ಆತಿಥ್ಯ ನೀಡಲು ಡಿಕೆಶಿ ಮುಂದಾಗಿದ್ದಾರೆ. ಬೆಳಗ್ಗೆ ತಿಂಡಿಗೆ ಇಡ್ಲಿ ನಾಟಿ ಕೋಳಿ ಸಾರು ಹಾಗೂ ನಾಟಿಕೋಳಿ ಫ್ರೈ ಸ್ಪೆಷಲ್ ಮೆನು ಸಿದ್ಧಪಡಿಸಲಾಗಿದೆ. ಡಿಕೆಶಿಯ ಸರ್ಕಾರಿ ನಿವಾಸದಲ್ಲಿ ಸಾಕಿದ್ದ ಕನಕಪುರದ ನಾಟಿ ಕೋಳಿಯನ್ನೇ ಸಿಎಂಗೆ ಉಣಬಡಿಸಲಾಗುತ್ತದೆ.


