ಗದಗ-ಹುಬ್ಬಳ್ಳಿ ರಸ್ತೆ ತಡೆದು ಅತಿಥಿ ಉಪನ್ಯಾಸಕರ ಪ್ರತಿಭಟನೆ | ಅತಿಥಿ ಉಪನ್ಯಾಸಕರ ಹೋರಾಟ 8ನೇ ದಿನಕ್ಕೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕಾಲೇಜು ಶಿಕ್ಷಣ ಇಲಾಖೆ ನಡೆಸುತ್ತಿರುವ ಕೌನ್ಸೆಲಿಂಗ್ ನಿಲ್ಲಿಸಬೇಕು ಮತ್ತು ಸೇವೆಯಲ್ಲಿ ಇರುವವರನ್ನು ಮುಂದುವರೆಸಬೇಕು ಮತ್ತು ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಲ್ಲಿ ನಗರದಲ್ಲಿ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹ ಸೋಮವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಈ ವೇಳೆ ಅರ್ಧ ಗಂಟೆಗೂ ಅಧಿಕ ಸಮಯ ಗದಗ-ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.

Advertisement

ಪ್ರತಿಭಟನೆಯ ವೇಳೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುತ್ತೇವೆ ಎನ್ನುವ ಕಾಂಗ್ರೆಸ್ ಸರಕಾರದ ಪ್ರಣಾಳಿಕೆಯನ್ನು ಪ್ರದರ್ಶಿಸಿದರು ಮತ್ತು ರಾಷ್ಟ್ರಪತಿಗಳಿಗೆ ಸಲ್ಲಿಸುವ ದಯಾಮರಣ ಪತ್ರ ಪ್ರದರ್ಶಿಸಿ ನಮ್ಮ ವಯಸ್ಸಾದ ತಂದೆ-ತಾಯಿ, ನಮ್ಮ ಮಕ್ಕಳನ್ನು ನೋಡಿಕೊಳ್ಳದಂತಹ ಸ್ಥಿತಿಯಿದ್ದು, ನಮಗೂ ಮತ್ತು ನಮ್ಮ ಕುಟುಂಬದ ಎಲ್ಲರಿಗೂ ದಯಾಮರಣ ನೀಡಲು ಮುಂದಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸತತ 7 ದಿನಗಳಿಂದ ತಮ್ಮ ಕುಟುಂಬವನ್ನು ತೊರೆದು ಪ್ರತಿಭಟನೆಯಲ್ಲಿ ನಿರತರಾಗಿರುವ ಅತಿಥಿ ಉಪನ್ಯಾಸಕಿಯರು ತಮ್ಮ ಮಕ್ಕಳಿಗೆ ವಿಡಿಯೋ ಕರೆ ಮಾಡಿ ಮಕ್ಕಳ ಜೊತೆ ಮಾತನಾಡುವಾಗ ಅಳುವ ದೃಶ್ಯ ಮನಕಲುಕುವಂತಿತ್ತು.

ಹೊನ್ನಳಿಯ ಅತಿಥಿ ಉಪನ್ಯಾಸಕ ಹಲದಪ್ಪ ಮಾತನಾಡಿ, ನಾವು ವಿದ್ಯಾರ್ಥಿಗಳ ಭವಿಷ್ಯ ಕಟ್ಟುವವರಾದರೂ ನಮ್ಮದೇ ಬದುಕು ಪ್ರಶ್ನಾರ್ಥಕವಾಗಿ, ಬೀದಿಯಲ್ಲಿ ಕುಳಿತುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಉನ್ನತ ಶಿಕ್ಷಣ ಸಚಿವರಾದ ಸುಧಾಕರ್ ಅವರು ನಮಗೆ ಆಧ್ಯತೆ ನೀಡುತ್ತಾರೆ ಎನ್ನುವ ಆಶಾಭಾವನೆಯಿಂದ 7 ದಿನಗಳ ಕಾಲ ಕಾದರೂ ಚಕಾರ ಎತ್ತದೆ ಇರುವ ಕಾರಣ ನಮ್ಮ ಕುಟುಂಬದ ಸಮೇತ ನಮಗೆ ದಯಾಮರಣ ನೀಡಬೇಕೆಂದು ಕೋರಿ ಸರಕಾರಕ್ಕೆ ಪತ್ರವನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಡಾ. ಹನಮಂತಗೌಡ ಆರ್.ಕಲ್ಮನಿ ಸೇರಿದಂತೆ ಗದಗ, ಬೀದರ, ಗುಲಬುರ್ಗಾ, ಕಾರವಾರ, ಧಾರವಾಡ, ಬಾಗಲಕೋಟೆ, ವಿಜಯನಗರ, ಬಳ್ಳಾರಿ, ಹಾವೇರಿ, ತುಮಕೂರು, ಕೊಡಗು, ಬೆಳಗಾವಿ, ಕೋಲಾರ, ಚಿಕ್ಕಮಗಳೂರು, ಉಡಪಿ, ಕಾರ್ಕಾಳ, ಹೊಸಪೇಟೆ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.

ಪ್ರತಿಭಟನೆಯ ವೇಳೆ ಗುಲ್ಬುರ್ಗಾದ ಅತಿಥಿ ಉಪನ್ಯಾಸಕ ಚಂದ್ರಕಾಂತ್ ಶಿರೋಳೆ ಮಾತನಾಡಿ, 10 ವರ್ಷಕ್ಕೂ ಹೆಚ್ಚು ಕಾಲ ವಿದ್ಯಾರ್ಥಿಗಳಿಗೆ ಜ್ಞಾನದ ಸುಧೆ ಹರಿಸಿದ 6 ಸಾವಿರ ಅತಿಥಿ ಉಪನ್ಯಾಸಕರನ್ನು ಹೊರಗಿಟ್ಟು ಕೌನ್ಸೆಲಿಂಗ್ ನಡೆಸಲಾಗುತ್ತಿದ್ದು, ತಕ್ಷಣ ಕೌನ್ಸೆಲಿಂಗ್ ನಿಲ್ಲಿಸಿ ಸೇವೆ ಸಲ್ಲಿಸುತ್ತಿರುವವರನ್ನು ಮುಂದುವರೆಸಬೇಕು ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here