ಬೆಂಗಳೂರು:- ಕೆಂಪೇಗೌಡ ವಿಮಾನ ನಿಲ್ದಾಣ ಸೇರಿ ನಗರದ ಕೆಲವು ಮಾಲ್ ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಎಸ್, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ, ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕುವುದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗಷ್ಟೇ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ನಗರದ ಏಳು ಶಾಲೆಗಳಿಗೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೆ ಏರ್ಪೋರ್ಟ್, ಮಾಲ್ಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ.
ಮೋಹಿತ್ ಕುಮಾರ್ ಎಂಬಾತ ‘ಜೈಷ್-ಇ-ಮೊಹಮ್ಮದ್’ ಉಗ್ರ ಸಂಘಟನೆ ಹೆಸರಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಇ-ಮೇಲ್ ವಿಳಾಸಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನಗರದ ಆಯ್ದ ಪ್ರಮುಖ ಶಾಪಿಂಗ್ ಮಾಲ್‌ಗಳನ್ನು ಸ್ಫೋಟಿಸುವುದಾಗಿ ಇ-ಮೇಲ್ ಕಳುಹಿಸಿದ್ದಾರೆ. ಇದರಿಂದ ಬೆಂಗಳೂರು ನಗರದಲ್ಲಿ ಮತ್ತೆ ಬಾಂಬ್ ಬೆದರಿಕೆ ಆತಂಕ ಸೃಷ್ಟಿಸಿದೆ.
ಕೆಂಪೇಗೌಡ ಏರ್ಪೋರ್ಟ್, ನಗರದ ಕೆಲವು ಮಾಲ್ಗಳನ್ನ ಸ್ಫೋಟಿಸುವುದಾಗಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಹೆಸರಿನಲ್ಲಿ ನವೆಂಬರ್ 30ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಧಿಕೃತ ಇ-ಮೇಲ್‌ಗೆ ಕಳುಹಿಸಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು, ವಿಮಾನ ನಿಲ್ದಾಣ ಮತ್ತು ಹೆಸರಿಸಲಾದ ಮಾಲ್‌ಗಳ ಸುತ್ತಮುತ್ತ ತೀವ್ರ ಭದ್ರತಾ ತಪಾಸಣೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳಗಳು ಸ್ಥಳಗಳನ್ನು ಕುಲಂಕುಷವಾಗಿ ಪರಿಶೀಲಿಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿದೆ.
ಈ ಬಗ್ಗೆ ಕೇಂದ್ರ ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


