ಮೌನದ ನಾಟಕ, ಮಹಾ ಸಂದೇಶ

0
Spread the love

ಸಮಾಜದಲ್ಲಿ ಮಹಿಳೆಯರ ಮೇಲಿನ ಹಿಂಸೆ, ಶೀಲಹರಣ, ಕಿರುಕುಳ, ಅನ್ಯಾಯ ಇವೆಲ್ಲವೂ ನಿತ್ಯ ಜರುಗುವ ದಾರುಣ ಘಟನೆಗಳಾಗಿರುವ ಸಂದರ್ಭದಲ್ಲಿ, ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನರೇಗಲ್ಲ ಪಟ್ಟಣದ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಕಿವುಡ ಮತ್ತು ಮೂಗ ಮಕ್ಕಳ ವಸತಿಗೃಹ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು ತಮ್ಮ ಬಾಲಹೃದಯದಿಂದಲೇ ಸಮಾಜದತ್ತ ದೊಡ್ಡ ಸಂದೇಶವನ್ನು ನೀಡುತ್ತಿದ್ದಾರೆ. ಮಾತಿಲ್ಲ, ಶಬ್ದವಿಲ್ಲ. ಆದರೆ ಅವರ ಕಣ್ಣಿನ ಭಾಷೆ, ಕೈಬರಹದ ಸಂವೇದನೆ ಮತ್ತು ಪಾತ್ರಧಾರಿಗಳ ಜೀವಂತತೆ ಸಮಾಜದ ಹೃದಯಕ್ಕೆ ನೇರವಾಗಿ ಮುಟ್ಟುತ್ತಿದೆ. ಕಳೆದ 4-5 ವರ್ಷಗಳಿಂದ `ಕಡ್ಲಿಮಟ್ಟಿ ಕಾಶಿಬಾಯಿ’ ಎಂಬ ನಾಟಕವನ್ನು ನಿರಂತರವಾಗಿ ಪ್ರದರ್ಶಿಸುತ್ತಾ, ಮಹಿಳೆಯರ ಗೌರವ ರಕ್ಷಣೆಯ ಬಗ್ಗೆ ಆಳವಾದ ಅರಿವು ಮೂಡಿಸುತ್ತಿರುವ ಇವರ ಪ್ರಯತ್ನ ಇಂದು ರಾಜ್ಯದಾದ್ಯಂತ ಪ್ರಶಂಸೆಗೆ ಪಾತ್ರವಾಗುತ್ತಿದೆ.

Advertisement

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ಶಬ್ದರಹಿತ ಪ್ರದರ್ಶನದ ಮೂಲಕ ತೋರಿಸುವ ಈ ನಾಟಕದಲ್ಲಿ, ಕಣ್ಣು ಮತ್ತು ಚಲನೆಯೇ ಸಂವಾದ. ಅದರಲ್ಲಿರುವ ನೋವು, ಕೋಪ, ದಿಕ್ಕು ತೋಚದ ಸ್ಥಿತಿ, ಹೆಣ್ಣಿನ ಧೈರ್ಯ ಇವೆಲ್ಲವೂ ಪ್ರೇಕ್ಷಕನ ಮನಸ್ಸನ್ನು ನಡುಗಿಸುತ್ತವೆ. ಮಾತಿಲ್ಲದ ಮಕ್ಕಳಿಂದ ಅಭಿಮತ ಹೇಳಿಸುವಷ್ಟು ಬಲವಾದ ಭಾಷಾಶಕ್ತಿ ಇನ್ನಾವುದಕ್ಕೂ ಇಲ್ಲ ಎನ್ನುವಂತೆ ನಾಟಕ ಮುಂದುವರಿಯುತ್ತದೆ.

ಕಡ್ಲಿಮಟ್ಟಿ ಗ್ರಾಮದ ಸಾಮಾನ್ಯ ಹೆಣ್ಣಾದ ಕಾಶಿಬಾಯಿ ಮನೆತನದ ಒತ್ತಡದಿಂದ ಹಿಡಿದು, ಸಮುದಾಯದ ಕುಟಿಲ ನೋಟ, ಮಹಿಳೆಯನ್ನು ಕೇವಲ ವಸ್ತುವೆಂದು ನೋಡುವ ಅಭದ್ರ ಮನೋಭಾವ ಇವೆಲ್ಲವನ್ನೂ ತನ್ನ ನಿಸ್ಸಹಾಯಕ ಮೌನದಲ್ಲಿ ನಿಲ್ಲಿಸುವ ಪಾತ್ರ. ಆದರೆ ಈ ಮಕ್ಕಳ ಪ್ರದರ್ಶನದಲ್ಲಿ ಕಾಶಿಬಾಯಿ ಮೌನದೊಳಗೆ ನಿಂತು ಕಿರುಚುತ್ತಾಳೆ. ಆ ಕಿರುಚುವಿಕೆ ಪ್ರೇಕ್ಷಕರ ಕಿವಿಗೆ ನೇರವಾಗಿ ತಾಗುತ್ತದೆ. ಪಾತ್ರದ ಮುಖಾಂತರ ತೋರಿಸುವ ದೃಶ್ಯದಲ್ಲಿ ಮಹಿಳೆಯರ ಹಕ್ಕನ್ನು ಕಿತ್ತುಕೊಳ್ಳುವ ಸಮಾಜದ ದುರ್ಗಂಧವೇ ಮರುಳುತ್ತದೆ.

ಶಾಲೆಯ ಶಿಕ್ಷಕರು ಈ ಮಕ್ಕಳಿಗೆ ಕಲೆಯನ್ನು ಕಲಿಸುವಾಗ, ಕೇವಲ ಅಭಿನಯವಲ್ಲ, ಸಮಾಜ ಬದಲಾವಣೆಗೂ ಕಾರಣರಾಗಬೇಕು ಎಂಬ ಮೌಲ್ಯ ಕಲಿಸುತ್ತಿದ್ದಾರೆ. ಪ್ರತಿ ದೃಶ್ಯದಲ್ಲೂ ಪ್ರತಿಯೊಬ್ಬ ಮಗು ತನ್ನ ಮೌನದ ಮೂಲಕ ಮಾತನಾಡುತ್ತದೆ. ನಮ್ಮನ್ನು ಅಂಗವಿಕಲರು ಎಂದು ನೋಡುವುದನ್ನು ನಿಲ್ಲಿಸಿ, ನಮ್ಮ ಸಾಮರ್ಥ್ಯವನ್ನು ನೋಡಿ ಎಂಬಂತೆ. ಈ ನಾಟಕವನ್ನು ನೋಡಿದ ಅನೇಕರು ನಂತರ ಮಹಿಳೆಯರ ವಿರುದ್ಧ ನಡೆಯುವ ಹಿಂಸೆಗೊಂದು ಹೊಣೆಗಾರಿಕೆಯಿಂದ ಯೋಚಿಸುವುದಾಗಿ ಹೇಳಿರುವುದು ಈ ಕಲೆಯ ಗೆಲುವು.

ಇದು ಕೇವಲ ಶಾಲೆಯ ಒಂದು ಕಾರ್ಯಕ್ರಮ ಅಲ್ಲ. ಬಳ್ಳಾರಿ, ಹಂಪಿ ಉತ್ಸವ, ಬೂದಗುಂಪ, ಇಳಕಲ್ಲ, ಗಜೇಂದ್ರಗಡ ಸಾಹಿತ್ಯ ಸಮ್ಮೇಳನ, ಕೋಡಿಕೊಪ್ಪದ ಹಠಯೋಗಿ ವೀರಪ್ಪಜ್ಜನ ಶತಮಾನೋತ್ಸವದಲ್ಲಿ, ಹಾಲಕೆರೆ ಜಾತ್ರಾ ಮಹೋತ್ಸವ ಸೇರಿದಂತೆ ಹಳ್ಳಿ, ಪಟ್ಟಣಗಳಲ್ಲಿ ಈ ಕಿವುಡ, ಮೂಗ ಮಕ್ಕಳು ವಿವಿಧ ರೀತಿಯ ನಾಟಕದ ಪ್ರದರ್ಶನ ನಡೆಸಿದ ಎಲ್ಲೆಡೆ ಜನರು ಕಣ್ಣು ತುಂಬಿಕೊಂಡು ನೋಡುವಂತಿದೆ. ಕಿವಿಗೊಡದವರು ನಮ್ಮ ಮನಸ್ಸನ್ನು ಮುಟ್ಟಿದ್ದಾರೆ ಎಂದು ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಲೆಯನ್ನು ಮೌನಗೊಳಿಸಬಹುದು, ಆದರೆ ಆ ಮೌನದೊಳಗಿರುವ ಬದಲಾವಣೆ-ಚಲನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲವೆಂಬುದನ್ನು ಮಕ್ಕಳು ಸಾಬೀತು ಮಾಡಿದ್ದಾರೆ.

ವಿಶ್ವ ಅಂಗವಿಕಲರ ದಿನದ ಪ್ರಯುಕ್ತ ಅನೇಕ ಕಡೆ ಭಾಷಣಗಳು, ಜಾಗೃತಿ ಅಂಕಣಗಳು, ಚರ್ಚೆಗಳು ನಡೆಯುತ್ತವೆ. ಆದರೆ ನರೇಗಲ್ಲದ ಈ ಮಕ್ಕಳ ನಾಟಕವೇ ನಿಜವಾದ ದಿನದ ಅರ್ಥ. ಅಂಗವೈಕಲ್ಯ ಕಣ್ಣು, ಕಿವಿ, ಕಾಲು, ಕೈಗಳಲ್ಲಿ ಇರಬಹುದು; ಆದರೆ ಮನಸ್ಸಿನ ಶಕ್ತಿ ಸಂಪೂರ್ಣವಾಗಿದ್ದರೆ ಜಗತ್ತನ್ನೇ ಬದಲಾಯಿಸಬಹುದು. ಈ ಮಕ್ಕಳು ನಾವು ದೌರ್ಬಲ್ಯಕ್ಕೇ ಜನಿಸಿಲ್ಲ, ಹೋರಾಡಲು ಜನಿಸಿದ್ದೇವೆ ಎಂಬ ಸಂದೇಶವನ್ನು ತಮ್ಮ ಅಭಿನ್ನಯದ ಮೂಲಕ ಸಾರುತ್ತಿದ್ದಾರೆ.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವನ್ನು ಕೇವಲ ಕಾನೂನು ಚೌಕಟ್ಟಿನಲ್ಲಿ ನಿಲ್ಲಿಸಲು ಸಾಧ್ಯವಿಲ್ಲ. ಸಮಾಜದ ಮನಸ್ಸು ಬದಲಾಗಬೇಕು. ಸಂವೇದನೆ, ಗೌರವ, ಜವಾಬ್ದಾರಿ ಇವೆಲ್ಲವೂ ಅಲ್ಲಿನ ಜನರ ಮನಸ್ಸಿನಲ್ಲಿ ಬೆಳೆಯಬೇಕು. ಅದಕ್ಕಾಗಿ ಕಲೆಯಿಗಿಂತ ದೊಡ್ಡ ಅಸ್ತ್ರ ಮತ್ತೊಂದು ಇಲ್ಲ. ಈ ಕಿವುಡ ಮಕ್ಕಳ ಹೋರಾಟ ಕಲೆಯ ಮೂಲಕ ನಡೆಯುತ್ತಿರುವ ಅತ್ಯಂತ ಬಲವಾದ ಸಾಮಾಜಿಕ ಪರಿವರ್ತನೆ.

ಮರದ ಬೇರುಗಳು ಮಣ್ಣಿನೊಳಗೆ ಮೌನವಾಗಿ ಬಲಗೊಳ್ಳುವಂತೆ, ಸಮಾಜ ಬದಲಾವಣೆಯ ಬೀಜವೂ ಮೌನದಲ್ಲೇ ಬಿತ್ತಲಾಗುತ್ತದೆ. ನರೇಗಲ್ಲದ ಈ ಮಕ್ಕಳ ಕಡ್ಲಿಮಟ್ಟಿ ಕಾಶಿಬಾಯಿ ಅದಕ್ಕೆ ಜೀವಂತ ಉದಾಹರಣೆ. ಅಂಗವಿಕಲತೆಯಲ್ಲ, ಅವರ ಸಾಮರ್ಥ್ಯದಲ್ಲೇ ನಮ್ಮ ಸಮಾಜದ ನಾವೂ ಕಲಿಯಬೇಕಾದ ಪಾಠ ಅಡಗಿದೆ. ವಿಶ್ವ ಅಂಗವಿಕರ ದಿನದ ಈ ಸಂದರ್ಭದಲ್ಲಿ ಈ ಮೌನದ ಕಲಾವಿದರ ಶಕ್ತಿ, ಧೈರ್ಯ ಸಾಮಾಜಿಕ ಹೊಣೆಗಾರಿಕೆಯ ಬದ್ಧತೆಗೆ ನಮನ ಮಾಡುವುದೇ ನಾವು ನೀಡಬಹುದಾದ ಅತ್ಯುತ್ತಮ ಗೌರವವಾಗಿದೆ.

1990ರಲ್ಲಿ ಪ್ರಾರಂಭವಾದ ಈ ಕಿವುಡ ಮಕ್ಕಳ ವಸತಿಯುತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ಮಕ್ಕಳಿಗೆ ಕೇವಲ ಕಲೆಯನ್ನು ಕಲಿಸಿಲ್ಲ, ಸಮಾಜದ ಬಾಧ್ಯತೆ ಮತ್ತು ಮಾನವೀಯತೆಯ ಪಾಠವನ್ನೂ ನೀಡುತ್ತಿದ್ದಾರೆ. ಮೂರು ನಾಲ್ಕು ನಿಮಿಷದ ದೃಶ್ಯಗಳಲ್ಲಿ ತೋರಿಸುವ ಸಂಕೇತ ಭಾಷೆಯಲ್ಲೇ ಪ್ರೇಕ್ಷಕರಿಗೆ ನಡುಕ ಉಂಟಾಗುವಂತಹ ಭಾವನಾತ್ಮಕ ತಿರುವುಗಳು ಮೂಡಿಬರುತ್ತವೆ.

  • ಮುಪ್ಪಿನ ಬಸವಲಿಂಗ ಸ್ವಾಮೀಜಿ.
    ಅನ್ನದಾನೇಶ್ವರ ಸಂಸ್ಥಾನ ಮಠ.

ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ನಿರ್ದೇಶಕರಿಗೆ ಸಂಭಾವನೆ ನೀಡುತ್ತದೆ. ಕಿವುಡ ಮತ್ತು ಕಿವುಡ-ಮೂಗ ಮಕ್ಕಳು ಪ್ರದರ್ಶನಗೈಯುತ್ತಿರುವ ನಾಟಕಕ್ಕೆ ಹೆಚ್ಚಿನ ಪ್ರೇರಣೆಯ ಅಗತ್ತವಿದೆ. ಈಗಾಗಲೇ ಸಂಸ್ಥೆಯ ಎಲ್ಲಾ ಶಿಕ್ಷಕರ ಬಳಗ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಕಲೆಯನ್ನು ಬೆಳೆಸುವಲ್ಲಿ ನಿರಂತರವಾಗಿದ್ದಾರೆ.

  • ಆರ್.ಕೆ. ಬಾಗವಾನ.
    ಶಿಕ್ಷಕ, ನಾಟಕ ಪರಿಕಲ್ಪನೆ ಹಾಗೂ ವಿನ್ಯಾಸಗಾರ.

  • ಸಿಕಂದರ ಎಂ.ಆರಿ.
    ಪತ್ರಕರ್ತರು, ಲೇಖಕರು, ಅಬ್ಬಿಗೇರಿ.


Spread the love

LEAVE A REPLY

Please enter your comment!
Please enter your name here