ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸರಕಾರಿ ಶಾಲೆಗಳಲ್ಲಿಯೂ ಸಹ ಉತ್ತಮ ಗುಣಮಟ್ಟದ ತಂತ್ರಜ್ಞಾನ ಆಧಾರಿತ ಶಿಕ್ಷಣ ದೊರೆಯುತ್ತಿದ್ದು, ಸರಕಾರಿ ಶಾಲೆಗಳನ್ನು ಉಳಿಸಿ-ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಸಮೀಪದ ಶಿಗ್ಲಿ ಗ್ರಾಮದಲ್ಲಿ ಗದಗ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಶಿರಹಟ್ಟಿ, ಸಮೂಹ ಸಂಪನ್ಮೂಲ ಕೇಂದ್ರ ಶಿಗ್ಲಿ ಆಶ್ರಯದಲ್ಲಿ ಮಂಗಳವಾರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಉನ್ನತೀಕರಿಸಿದ ಸರಕಾರಿ ಪ್ರೌಢಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಗ್ಲಿ ಗ್ರಾಮ ನಮ್ಮ ಕ್ಷೇತ್ರದಲ್ಲಿ ಶಿಕ್ಷಣ ಕಾಶಿ ಎನ್ನುವ ಹೆಸರು ಪಡೆದಿದ್ದು, ಇಲ್ಲಿನ ಅನೇಕ ಮಹನೀಯರು ತಮ್ಮ ಸಾಮರ್ಥ್ಯದಿಂದ ದೇಶದ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಗ್ರಾಮದ ಕೀರ್ತಿಗೆ ಕಾರಣರಾಗಿದ್ದಾರೆ. ಇಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳು, ಪ.ಪೂ. ಕಾಲೇಜುಗಳಿದ್ದು, ಉತ್ತಮ ಶಿಕ್ಷಣ ಪ್ರಗತಿಯನ್ನು ನೀಡಿವೆ. ಈ ನಿಟ್ಟಿನಲ್ಲಿ ಇಲ್ಲಿ ಸರಕಾರಿ ಪ್ರೌಢಶಾಲೆಯ ಬೇಡಿಕೆಯು ಬಹುದಿನಗಳಿಂದ ಇದ್ದು, ಇದಕ್ಕಾಗಿ ವಿಶೇಷ ಪ್ರಯತ್ನ ಮಾಡಿ ಮಂಜೂರಿ ದೊರೆತಿದೆ. ಅದಕ್ಕಾಗಿ ಇಲ್ಲಿನ ಅನೇಕರು ಪಕ್ಷಾತೀತವಾಗಿ ಸಹಕಾರ ನೀಡಿದ್ದಾರೆ. ಇದೀಗ ಇಲ್ಲಿ ಪ್ರಾರಂಭವಾಗಿರುವ ಸರಕಾರಿ ಪ್ರೌಢಶಾಲೆಗೆ ಯಾವುದೇ ಅನಾನುಕೂಲತೆಗಳು ಆಗದಂತೆ ವಿಶೇಷ ಆದ್ಯತೆ ನೀಡುವ ಮೂಲಕ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಕ್ರಮವಹಿಸಬೇಕಾಗಿದೆ ಎಂದು ಹೇಳಿದರು.
ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಅಧ್ಯಕ್ಷೆ ಸಂಗೀತಾ ಪೂಜಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ನಾಣಕಿ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಬೂದಿಹಾಳ, ಆದೇಶ ಹುಲಗೂರ, ದೇವೆಂದ್ರಪ್ಪ ಕೊಪ್ಪದ, ಮಂಜುನಾಥ ಬದಿ, ಬಿ.ಎಸ್. ಹರ್ಲಾಪೂರ, ಸಿಆರ್‌ಪಿ ಜ್ಯೋತಿ ಗಾಯಕವಾಡ, ಮುಖ್ಯೋಪಾಧ್ಯಾಯೆ ಎನ್.ವಿ. ಕುಲಕರ್ಣಿ, ಡಿ.ವೈ. ಹುನಗುಂದ, ಅಶೋಕ ಶಿರಹಟ್ಟಿ, ರಾಮಣ್ಣ ಲಮಾಣಿ, ಕೃಷ್ಣ ಬಿದರಳ್ಳಿ, ಸಂತೋಷ ತಾಂದಳೆ ಹಾಗೂ ಗ್ರಾ.ಪಂ ಸದಸ್ಯರು ಹಾಜರಿದ್ದರು. ಎಸ್.ಬಿ. ಅಣ್ಣಿಗೇರಿ ಸ್ವಾಗತಿಸಿದರು, ತಿಪ್ಪಾ ನಾಯ್ಕ್ ನಿರೂಪಿಸಿದರು.
ಬಾಕ್ಸ್
ಡಿಡಿಪಿಐ ಆರ್.ಎಸ್. ಬುರಡಿ ಮಾತನಾಡಿ, ಶಿಗ್ಲಿಯ ಗ್ರಾಮಸ್ಥರು ಶಿಕ್ಷಣ ಪ್ರೇಮಿಗಳಾಗಿದ್ದು, ಇಲ್ಲಿ ಎಲ್ಲರೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ಶಿಕ್ಷಣವು ಒಂದು ಶಕ್ತಿ. ಅದಕ್ಕಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಬೇಕಾಗಿರುವದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಇದೀಗ ಉದ್ಘಾಟನೆಗೊಂಡಿರುವ ಸರಕಾರಿ ಪ್ರೌಢಶಾಲೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಮಾರ್ಪಾಡು ಆದರೆ ಇದೊಂದು ದೊಡ್ಡ ಹೆಜ್ಜೆಯಾಗಲಿದೆ. ಮಕ್ಕಳಿಗೆ ಅನೇಕ ಸೌಲಭ್ಯಗಳ ಜೊತೆ ಖಾಸಗಿ ಶಾಲೆಗಳಂತೆ ಉತ್ತಮ ಶಿಕ್ಷಣವೂ ದೊರೆಯುವಂತಾಗುತ್ತದೆ ಎಂದರು.


