ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಬೀದಿ ಬದಿ ವ್ಯಾಪಾರಸ್ಥರು ತಾವು ಮಾರುವ ಆಹಾರ ಪದಾರ್ಥಗಳು ಶುದ್ಧತೆ, ಸ್ವಚ್ಛತೆಯಿಂದ ಕೂಡಿರಬೇಕು ಮತ್ತು ಧೂಳು ಇನ್ನಿತರ ವಸ್ತುಗಳು ಆಹಾರ ಪದಾರ್ಥಗಳ ಮೇಲಿರದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ಪುರಸಭೆ ಸಭಾಭವನದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆ, ಪುರಸಭೆ ಕಾರ್ಯಾಲಯಗಳ ಆಶ್ರಯದಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ, ಪಿಎಂ ಸ್ವನಿಧಿಯ `ಸಮೃದ್ಧಿ ಯೋಜನೆ ಉತ್ಸವ’ ಕಾರ್ಯಕ್ರಮದಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಹಮ್ಮಿಕೊಳ್ಳಲಾಗಿದ್ದ ಆಹಾರ ಶುದ್ಧತೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರು ತಮ್ಮ ತಮ್ಮ ಜೀವನೋಪಾಯದ ಉದ್ದೇಶದೊಂದಿಗೆ ಜನರ ಆರೋಗ್ಯ, ಆರೋಗ್ಯಕರ ಸಮಾಜ ನಿರ್ಮಾಣದ ಸದುದ್ದೇಶ ಹೊಂದಿರಬೇಕು. ಬೀದಿ ಬದಿ ವ್ಯಾಪಾರಸ್ಥರಿಗೆ ನೆರಳಿನ ಕೊಡೆ, ಐಡಿ ಕಾರ್ಡ್ ಕೊಡುವ ಜತೆಗೆ ವ್ಯಾಪಾರಸ್ಥರ ಸಮಸ್ಯೆ ಪರಿಹರಿಸಲು ಪ್ರಯತ್ನ ಮಾಡುತ್ತೇನೆ. ಬಜಾರ ರಸ್ತೆಯಲ್ಲಿ ತಮಗೆ ನಿಲ್ಲುವ ಸ್ಥಳದಲ್ಲಿ ಮಾರ್ಕಿಂಗ್ ಮಾಡಲಾಗುವುದು, ಟ್ರಾಫಿಕ್ ಸಮಸ್ಯೆ ಪರಿಹರಿಸಲು ತಾವು ಸಹಕಾರ ನೀಡಬೇಕು. ಸರ್ಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸುವ ಕೆಲಸ ಮಾಡುತ್ತೇನೆ ಎಂದರು.
ಈ ವೇಳೆ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ, ಸಮುದಾಯ ಸಂಘಟನಾಧಿಕಾರಿ ಶೋಭಾ ಬೆಳ್ಳಿಕೊಪ್ಪ, ವ್ಯವಸ್ಥಾಪಕಿ ಮಂಜುಳಾ ಹೂಗಾರ, ಕಂದಾಯ ಅಧಿಕಾರಿ ಸುರೇಶ ಪೂಜಾರ, ಹನಮಂತಪ್ಪ ನಂದೆಣ್ಣನವರ, ಸಿಆರ್‌ಪಿ ಲಕ್ಷ್ಮೀ ಓದುನವರ, ಇಂದ್ರಾ ಸವಣೂರ ಸೇರಿದಂತೆ ಬೀದಿ ಬದಿ ವ್ಯಾಪಾರಸ್ಥರು ಇದ್ದರು.



