ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಇತ್ತೀಚೆಗೆ ಖಾಸಗಿ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಆದರೆ ಪಬ್‌ನಲ್ಲಿ ನಡೆದ ಅವರ ವರ್ತನೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಅಶೋಕನಗರ ಠಾಣಾ ವ್ಯಾಪ್ತಿಯ ಪಬ್‌ನಲ್ಲಿ ನವೆಂಬರ್ 28ರಂದು ನಡೆದ ಈ ಘಟನೆಯಲ್ಲಿ, ಆರ್ಯನ್ ಖಾನ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದಾಗ, ಅವರು ಪಬ್‌ನ ಬಾಲ್ಕನಿಯಿಂದ ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸಿದ ದೃಶ್ಯಗಳು ವಿಡಿಯೋ ರೂಪದಲ್ಲಿ ವೈರಲ್ ಆಗಿವೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಆರ್ಯನ್ ವರ್ತನೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಾಮಾಜಿಕ ಸ್ಥಳದಲ್ಲಿ ಅಸಭ್ಯ ಸನ್ನೆ ತೋರಿಸಿದ್ದಕ್ಕೆ ಬೆಂಗಳೂರು ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ವ್ಯಕ್ತವಾಗಿದೆ.
ಈ ವೇಳೆ ಆರ್ಯನ್ ಖಾನ್ ಜೊತೆ ವಕ್ಫ್ ಸಚಿವ ಬಿ.ಜಿ. ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಮತ್ತು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಪುತ್ರ — ಮೊಹಮ್ಮದ್ ನಲಪಾಡ್ ಕೂಡ ಜೊತೆಯಾಗಿದ್ದರು. ಆರ್ಯನ್ ಅಸಭ್ಯ ಸನ್ನೆ ತೋರಿಸಿದಾಗ ಇವರಿಬ್ಬರೂ ನಗುತ್ತಾ ಪ್ರತಿಕ್ರಿಯಿಸಿದ್ದನ್ನೂ ವಿಡಿಯೋ ತೋರಿಸುತ್ತದೆ.
ವೀಡಿಯೊ ವೈರಲ್ ಆದರೂ, ಇದುವರೆಗೆ ಆರ್ಯನ್ ವಿರುದ್ಧ ಯಾವುದೇ ಪೊಲೀಸರು ಕ್ರಮ ಕೈಗೊಂಡಿಲ್ಲ. “ಸಾಮಾನ್ಯರು ಮಾಡಿದರೆ ತಕ್ಷಣ ಪ್ರಕರಣ! ದೊಡ್ಡವರ ಮಕ್ಕಳು ಮಾಡಿದರೆ ಮೌನ?” ಎಂದು ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ.
ಇತ್ತ ಆರ್ಯನ್ ಖಾನ್ ಇತ್ತೀಚೆಗಷ್ಟೇ ನಿರ್ದೇಶಕನಾಗಿ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸಿರೀಸ್ ಮೂಲಕ ಗಮನಸೆಳೆದಿದ್ದಾರೆ. ಶಾರುಖ್ ಪುತ್ರಿ ಸುಹಾನಾ ಖಾನ್ ನಟಿಯಾಗಿ ‘ಕಿಂಗ್’ ಸಿನಿಮಾದ ಮೂಲಕ ತೆರೆಮೇಲೆ ಬರಲು ಸಿದ್ಧರಾಗಿದ್ದಾರೆ.



