
ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಮಣ್ಣಿನಿಂದಾದ ಮಡಿಕೆ ಒಂದು ದಿನ ನಾಶವಾಗುತ್ತದೆ. ಆದರೆ ಮಣ್ಣು ನಾಶವಾಗುವುದಿಲ್ಲ. ಪ್ರಪಂಚದ ತುಂಬೆಲ್ಲ ತುಂಬಿದ್ದಾನೆ ಪರಮಾತ್ಮ. ಆದರೆ ಕಣ್ಣಿಗೆ ಕಾಣುವುದಿಲ್ಲ. ಆಧ್ಯಾತ್ಮದ ಅರಿವು ಮತ್ತು ಸಾಧನೆಯಿಂದ ಬದುಕಿನಲ್ಲಿ ಉನ್ನತಿ ಸಾಧಿಸಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಗುರುವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಎಲ್ಲಿ ಹುಟ್ಟಬೇಕು ಅನ್ನುವುದು ನಮ್ಮ ಕೈಯಲ್ಲಿಲ್ಲ. ಆದರೆ ಎಲ್ಲಿ ಮುಟ್ಟಬೇಕು ಅನ್ನುವುದು ನಮ್ಮ ಕೈಯಲ್ಲಿದೆ. ಗುರಿ ಮುಟ್ಟುವ ತನಕ ಮನುಷ್ಯನ ಹೆಜ್ಜೆಯಿರಬೇಕು. ಸೂರ್ಯ ಆರಂಭದಲ್ಲಿ ಕೆಂಪಾಗಿ ಉದಯಿಸಿ, ಕೆಂಪಾಗಿಯೇ ಅಸ್ತನಾಗುತ್ತಾನೆ. ಅದೇ ರೀತಿ ಮಹಾತ್ಮರು ಸಂಪತ್ತಿರಲಿ-ವಿಪತ್ತಿರಲಿ, ಸುಖವಿರಲಿ-ದುಃಖವಿರಲಿ ಯಾವಾಗಲೂ ಒಂದೇ ರೀತಿ ಬಾಳುತ್ತಾರೆ. ಸಹನೆಯಿಲ್ಲದ ಹೆಂಡತಿ, ಸಂಪಾದನೆಯಿಲ್ಲದ ಗಂಡ, ಮಾತು ಕೇಳದ ಮಕ್ಕಳು ಸುಖ ಸಂಸಾರದ ಶತ್ರುಗಳು. ಜ್ಞಾನದಿಂದ ಅಧಿಕಾರ ದೊರೆಯಬಹುದು. ಆದರೆ ಗೌರವ ಸಿಗಬೇಕಾದರೆ ವ್ಯಕ್ತಿತ್ವ ಸಂಪಾದಿಸಿಕೊಳ್ಳಬೇಕಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಬದುಕಿನ ಉನ್ನತಿ ಮತ್ತು ಶ್ರೇಯಸ್ಸಿಗಾಗಿ ಬೋಧಿಸಿದ ಶಿವಾದ್ವೇತ ಜ್ಞಾನ ಸಂಪತ್ತು ಸಕಲರನ್ನು ಉದ್ಧರಿಸುತ್ತದೆ ಎಂದರು.
ಕಲ್ಲುಬಾಳುಮಠದ ಶಿವಾನಂದ ಶಿವಾಚಾರ್ಯರು, ಹುಡುಗಿ ಹಿರೇಮಠ ಸೋಮೇಶ್ವರ ಶಿವಾಚಾರ್ಯರು, ಬಿಡದಿಮಠದ ಶ್ರೀಗಳು, ಕಲ್ಲಹಳ್ಳಿ ಶ್ರೀಗಳು ಸಮಾರಂಭದಲ್ಲಿ ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಪ್ರಭುದೇವ ಕಲ್ಮಠ, ಎಂ. ಕೊಟ್ರೇಶಪ್ಪ, ಬಾಸಾಪುರದ ಬಿ.ಎಂ. ಭೋಜೇಗೌಡರು, ಕಡವಂತಿ ಅಣ್ಣೇಗೌಡರು, ಶಿರವಾಸೆ ವಿಶ್ವನಾಥ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ನಾಡಿನೆಲ್ಲೆಡೆಯಿಂದ ಆಗಮಿಸಿದ ಭಕ್ತರು ಜಗದ್ಗುರುಗಳ ದರ್ಶನಾಶೀರ್ವಾದ ಪಡೆದರು. ಹುಣ್ಣಿಮೆ ನಿಮಿತ್ತ ಶ್ರೀಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆಗಮಿಸಿದ ಸಕಲ ಸದ್ಭಕ್ತರಿಗೆ ಪ್ರಸಾದ ವಿನಿಯೋಗ ಜರುಗಿತು.

