ಬೆಂಗಳೂರು:- ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಸಂಸ್ಥೆಯಲ್ಲಿ ಗಂಧದೆಣ್ಣೆ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಜೆಡಿಎಸ್ ಶಾಸಕ ಹೆಚ್.ಟಿ ಮಂಜು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮೈಸೂರು ಸ್ಯಾಂಡಲ್ ಸೋಪ್ ಖ್ಯಾತಿಯ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ಸಂಸ್ಥೆಯಲ್ಲಿ ಗಂಧದೆಣ್ಣೆ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಹಗರಣದಲ್ಲಿ ಅಧಿಕಾರಿಗಳು, ಶಾಸಕರು, ಸಚಿವರು ಭಾಗಿಯಾಗಿದ್ದಾರೆ. ಸರ್ಕಾರಕ್ಕೆ ಕಿಕ್‌ಬ್ಯಾಕ್ ಹೋಗಿದೆ ಎಂದು ಗಂಭೀರವಾಗಿ ಆರೋಪ ಮಾಡಿದ್ರು.
ಸಾಬೂನು ಮತ್ತು ಮಾರ್ಜಕ ತಯಾರಿಕೆಯಲ್ಲಿ ಬಳಸುವ ತೈಲ ಸರಬರಾಜಿಗೆ ಬೇರೆ ಕಂಪನಿಗೆ ಅವಕಾಶ ನೀಡದೇ, ಒಂದೇ ಕಂಪನಿಗೆ ಟೆಂಡರ್‌ಗೆ ಅವಕಾಶ ಕೊಡಲಾಗಿದೆ. 2019ರಲ್ಲಿಯೇ ಬ್ಲ್ಯಾಕ್‌ಲಿಸ್ಟ್‌ನಲ್ಲಿರುವ ಕಂಪನಿಗೆ ಟೆಂಡರ್ ಕೊಡಲಾಗಿದೆ. 2022, 2023ರಲ್ಲಿ ಒಂದು ಕೆ.ಜಿಗೆ ಸ್ಯಾಂಡಲ್ ಆಯಿಲ್‌ಗೆ 2,24,655 ರೂಪಾಯಿ ಇತ್ತು. ನಾನು ಪತ್ರ ಬರೆದ ನಂತರ 2025ರಲ್ಲಿ ಸ್ಯಾಂಡಲ್ ಆಯಿಲ್ 93,116 ರೂ ಬೆಲೆ ಮಾಡುತ್ತಾರೆ ಎಂದು ಆರೋಪ ಮಾಡಿದ್ದಾರೆ.


