ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಅನೇಕ ಜಾತಿ, ಧರ್ಮ, ಆಚಾರ, ವಿಚಾರ, ವೈವಿಧ್ಯತೆಯಿಂದ ಕೂಡಿರುವ ಭಾರತದಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನ ರಕ್ಷಣೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನವನ್ನು 8 ಬಾರಿ ತಿದ್ದುಪಡಿಗೊಳಿಸಿದ್ದಾರೆ. ಇದಕ್ಕಿಂತ ನಾಲ್ಕು ಪಟ್ಟು ಹೆಚ್ಚು ಕಾಂಗ್ರೆಸ್ ಸಂವಿಧಾನವನ್ನು ತಿದ್ದುಪಡಿ ಮಾಡಿದೆ. ಕಾಂಗ್ರೆಸ್ ಅಧಿಕಾರಕ್ಕಾಗಿ ತುರ್ತು ಪರಿಸ್ಥಿತಿ ಘೋಷಣೆ ಮಾಡುವ ಮೂಲಕ ಸಂವಿಧಾನವನ್ನು ಕೊಂದಿದೆ. ಬಿಜೆಪಿ ಮೇಲೆ ಅಪಪ್ರಚಾರ ಮಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಶನಿವಾರ ಶಿರಹಟ್ಟಿಯ ಅಂಬೇಡ್ಕರ್ ನಗರದ ಶ್ರೀ ಮರಿಯಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಮತ್ತು ಬಿಜೆಪಿ ನಗರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ‘ಭೀಮನಡೆ ಅಭಿಯಾನ’ ಕಾರ್ಯಕ್ರಮದಲ್ಲಿ ಅಂಬೇಡ್ಕರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಅಂಬೇಡ್ಕರ್ ದೇಶಕ್ಕೆ ಅರ್ಪಿಸಿರುವ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಮೊದಲು ತಿಳಿಯಬೇಕು. ಅಟಲ್ ಬಿಹಾರಿ ವಾಜಪೇಯಿ, ಈಗಿನ ಪ್ರಧಾನಿ ನರೇಂದ್ರ ಮೋದಿ ಇವರುಗಳು ಸಂವಿಧಾನ ತಿದ್ದುಪಡಿ ಮಾಡಿರುವುದು ಪ್ರಜೆಗಳ ಒಳಿತಿಗಾಗಿಯೇ ವಿನಃ ಅಧಿಕಾರ ಉಳಿಸಿಕೊಳ್ಳುವ ಉದ್ದೇಶಕ್ಕಲ್ಲ. ನಾವು ಸಂವಿಧಾನದ ನೈಜ ಮಾಹಿತಿ ಕೊಡುತ್ತಿದ್ದೇವೆ ಎಂದರು.
ದಲಿತ ಮುಖಂಡರಾದ ಉಡಚಪ್ಪ ಹಳ್ಳಿಕೇರಿ, ಚಂದ್ರಶೇಖರ ಹರಿಜನ ಮಾತನಾಡಿ, ಜಗತ್ತಿಗೆ ಯಾವುದೇ ಭೇದಭಾವ ಇಲ್ಲದೇ ಸೂರ್ಯನು ಎಲ್ಲರಿಗೂ ಸಮನಾಗಿ ಬೆಳಕು ನೀಡುವಂತೆ ಡಾ. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವು ಭಾರತದ ಪ್ರತಿಯೊಬ್ಬರಿಗೂ ಸಮಾನತೆಯನ್ನು, ಗೌರವದಿಂದ ಬದುಕುವ ಹಕ್ಕನ್ನು ಕಲ್ಪಿಸಿದೆ. ಹತ್ತು ಜನ್ಮಗಳು ಉದಯಿಸಿ ಬಂದರೂ ಯಾರಿಂದಲೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಶಿವಪ್ರಕಾಶ ಮಹಾಜನಶೆಟ್ಟರ, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ತಿಮ್ಮರಡ್ಡಿ ಮರಡ್ಡಿ, ಫಕ್ಕೀರೇಶ ರಟ್ಟಿಹಳ್ಳಿ, ಮೋಹನ್ ಗುತ್ತೆಮ್ಮನವರ, ಸಂದೀಪ ಕಪ್ಪತ್ತನವರ, ತಿಪ್ಪಣ್ಣ ಕೊಂಚಿಗೇರಿ, ಬಿ.ಡಿ. ಪಲ್ಲೇದ, ಶಶಿ ಪೂಜಾರ, ಮಹೇಶ ಬಡ್ನಿ, ಗಂಗಾಧರ ಮೆಣಸಿನಕಾಯಿ, ಬಸವರಾಜ ಪೂಜಾರ, ಶಿವು ಲಮಾಣಿ, ಬಸವರಾಜ ವಡವಿ, ಸಂತೋಷ ತೋಡೆಕಾರ, ಶರಣಪ್ಪ ಹರ್ಲಾಪೂರ, ಶಿವಾನಂದ ಗೌಡನಾಯಕರ, ನಿಂಗರಾಜ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.
ಬದುಕಿನುದ್ದಕ್ಕೂ ಸಂಘರ್ಷದ ಬೆಂಕಿಯಲ್ಲಿ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಮರೆಯುವಂತಿಲ್ಲ. ಅವರ ಜ್ಞಾನ ಮತ್ತು ಸ್ವಾಭಿಮಾನ ಪ್ರತಿ ವ್ಯಕ್ತಿಗೂ ಅತ್ಯುತ್ತಮ ಸಂದೇಶಗಳಾಗಿವೆ. ಅವರ ಸಂದೇಶ ಮೌಲ್ಯಗಳನ್ನು ಪಾಲಿಸುವುದರೊಂದಿಗೆ ಅವರ ಅಪಾರ ಕೊಡುಗೆಗಳನ್ನು ತಿಳಿದುಕೊಳ್ಳಬೇಕು. ಅಂಬೇಡ್ಕರ್ ಅವರ ವಿಚಾರ, ಆಶಯ, ತತ್ವಗಳನ್ನು ಹೇಳಿಕೊಂಡು ರಾಜಕಾರಣ ಮಾಡಿದ ಕಾಂಗ್ರೆಸ್ ಯಾವತ್ತೂ ಜನಮಾನಸದಲ್ಲಿ ಉಳಿಯುವಂತಹ ಕೆಲಸ ಮಾಡಿಲ್ಲ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.



