ಹಾಸನ:- ನನ್ನ ಶ್ರಮ, ನನ್ನ ಸಂಪಾದನೆ, ನನಗಿಷ್ಟವಾದ ವಾಚ್, ಶೂ ಧರಿಸ್ತೀನಿ. ಬಿಜೆಪಿಯವರಿಗೆ ಕಷ್ಟವೇನೂ ಎಂದು ಡಿಕೆ ಶಿವಕುಮಾರ್ ಪಂಚ್ ಡೈಲಾಗ್ ಹೊಡೆದಿದ್ದಾರೆ.
ವಿಪಕ್ಷ ನಾಯಕರು ನಿಮ್ಮ ವಾಚ್ ವಿಚಾರವಾಗಿ ಟೀಕೆ ಮಾಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ನಾನು ನನ್ನ ದುಡ್ಡಲ್ಲಿ ಎಷ್ಟು ವಾಚ್ ಬೇಕಾದ್ರೂ ಖರೀದಿ ಮಾಡ್ತೀನಿ, ಖರೀದಿ ಮಾಡುವ ಶಕ್ತಿ ನನಗಿದೆ. ಯಾರು ಯಾವ ಪ್ಯಾಂಟ್ ಹಾಕುತ್ತಾರೆ, ಯಾವ ವಾಚ್ ಹಾಕುತ್ತಾರೆ, ಯಾವ ಕನ್ನಡಕ ಹಾಕುತ್ತಾರೆ ಎಂದು ನಾನು ಪ್ರಶ್ನೆ ಮಾಡುವುದಿಲ್ಲ.
ಇದು ವೈಯಕ್ತಿಕ ವಿಚಾರ, ಅವರವರ ಆಸೆಗಳು. ಕೆಲವರು ಒಂದು ಸಾವಿರದ ಶೂ ಧರಿಸಿದ್ರೆ, ಕೆಲವರು 1 ಲಕ್ಷದ ಶೂ ಧರಿಸುತ್ತಾರೆ. ನಾನು 1 ಸಾವಿರ ರೂಪಾಯಿ ವಾಚನ್ನೂ ಕಟ್ತೀನಿ, 10 ಲಕ್ಷ ರೂ. ವಾಚನ್ನೂ ಕಟ್ತೀನಿ. ಅದು ನನಗೆ ಬಿಟ್ಟ ವಿಚಾರ. ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ. ಪಾಪ, ವಿರೋಧ ಪಕ್ಷದ ನಾಯಕರಿಗೆ ಅನುಭವದ ಕೊರತೆ ಇದೆ. ಅವರಿಗೆ ಚುನಾವಣೆ ನಿಂತ ಅನುಭವವೂ ಇಲ್ಲ. ಹೀಗಾಗಿ ಗೊತ್ತಿಲ್ಲದೇ ಮಾತನಾಡಿದ್ದಾರೆ. ಅವರು ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿರುವುದರಿಂದ ಪ್ರತಿಕ್ರಿಯೆ ನೀಡಿದ್ದೇನೆ. ಬೇರೆಯವರಾಗಿದ್ದರೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದರು.


