ಬೆಳಗಾವಿ:- ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ.
ಸರಣಿ ಸಮಸ್ಯೆಗಳನ್ನು ಮುಂದಿಟ್ಟು ಸರ್ಕಾರವನ್ನ ಕಟ್ಟಿಹಾಕಲು ವಿಪಕ್ಷಗಳು ಸಜ್ಜುಗೊಂಡಿವೆ. ಪ್ರತಿಪಕ್ಷಗಳಿಗೆ ಕೌಂಟರ್ ಕೊಡಲು ಕಾಂಗ್ರೆಸ್ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲ ದಿನವಾದ ಇಂದು ಅಗಲಿದ ಗಣ್ಯರಿಗೆ ಸಂತಾಪ ಸೂಚಕ ಸಭೆ ನಡೆಯಲಿದೆ. ಆದರೆ, ಮೊದಲ ದಿನವೇ ಉತ್ತರ ಕರ್ನಾಟಕ ಬಗ್ಗೆ ಚರ್ಚೆಗೆ ನಿಲುವಳಿ ಮಂಡಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಅಧಿವೇಶನದಲ್ಲಿ ಭಾರೀ ಹಂಗಾಮ ನಡೆಯುವ ಸಾಧ್ಯತೆ ದಟ್ಟವಾಗಿದೆ. ಅನ್ನದಾತರ ಸಮಸ್ಯೆಗಳನ್ನು ಇಟ್ಟುಕೊಂಡೇ ಮೊದಲ ಹಂತದ ಹೋರಾಟಕ್ಕಿಳಿಯಲು ಬಿಜೆಪಿ ಸರ್ವ ಸನ್ನದ್ಧವಾಗಿದೆ.
ಬದಲಾದ ರಾಜಕೀಯ ಸನ್ನಿವೇಶ, ಸರ್ಕಾರದ ವಿವಾದಾತ್ಮಕ ನಡೆಗಳು ಮತ್ತು ಉತ್ತರ ಕರ್ನಾಟಕದ ಜನರ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಈ ಅಧಿವೇಶನ ವಿಶೇಷ ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ಶಾಸಕರಲ್ಲೇ ಮುಂದುವರಿದ ಬಣಗಾರಿಕೆ, ದಿಲ್ಲಿ ಯಾತ್ರೆ, ನಾಯಕತ್ವ ಬದಲಾವಣೆ ಚರ್ಚೆ, ಬ್ರೇಕ್‌ಫಾಸ್ಟ್-ಲಂಚ್-ಡಿನ್ನರ್ ಸಭೆಗಳ ಪ್ರಸ್ತಾಪ, ಇವೆಲ್ಲವೂ ಸರ್ಕಾರಕ್ಕೆ ಮುಜುಗರ ಉಂಟು ಮಾಡಲಿವೆ. ಪ್ರತಿಪಕ್ಷಗಳು ಈ ಒಳಗಿನ ಗೊಂದಲವನ್ನೂ ಆಯುಧವಾಗಿ ಬಳಸಿಕೊಳ್ಳಲಿವೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೇ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಮೆಕ್ಕೆಜೋಳ, ಕಬ್ಬಿನ ಬೆಲೆ ನಿಗದಿ, ಹೆಸರು ಕಾಳು ಬೆಲೆ ಕುಸಿತವಾಗಿರುವುದು ರೈತರನ್ನು ಕಂಗೆಡಿಸಿದೆ. ಕಬ್ಬು ಬೆಳೆಗಾರರ ಪ್ರತಿಭಟನೆ ತಾತ್ಕಾಲಿಕವಾಗಿ ಶಮನವಾಗಿದ್ದರೂ, ಬೇಡಿಕೆ ಇನ್ನೂ ಪೂರ್ಣವಾಗಿ ಈಡೇರಿಲ್ಲ. ಹೀಗಾಗಿ, ಬಾಗಲಕೋಟೆ ಹಾಗೂ ಇತರ ಜಿಲ್ಲೆಗಳ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.



