ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ ಎಮ್.ಎ. ಫಣಿಭಂದ ಹೇಳಿದರು.
ದಕ್ಷಿಣ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಗಿರುವ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ, ಸಾಹಿತ್ಯ, ಕ್ರೀಡೆ ಮತ್ತು ಜ್ಞಾನ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯ ಬುನಾದಿಯಾಗಿವೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಮತ್ತು ಭಾಷಾ ಲಾಲಿತ್ಯವನ್ನು ಬೆಳೆಸುತ್ತವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ದಕ್ಷಿಣ ವಲಯದ ಸಿ.ಆರ್.ಪಿ ಆರ್.ಜಿ. ಮ್ಯಾಕಲ್ ಮಾತನಾಡಿ, ಮಕ್ಕಳಲ್ಲಿ ಅಡಗಿದ ಸುಪ್ತ ಪ್ರತಿಭೆಗಳನ್ನು ಹೊರತರಲು ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವಗಳು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ ಮರಾಠಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಭಾವಗೀತೆ, ಜನಪದ ನೃತ್ಯ, ನಾಟಕ, ಚುಟುಕು ಕಥನ, ಪದ್ಯ ಪಠಣ, ಕಂಠಪಾಠ ಮುಂತಾದ ಹಲವು ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಕಲಾ ವೈವಿಧ್ಯತೆ ಮತ್ತು ಸೃಜನಶೀಲತೆ ಪ್ರೇಕ್ಷಕರ ಮನಸೂರೆಗೊಂಡಿತು. ಕಲೋತ್ಸವದ ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ಸರಗಣಾಚಾರಿ, ಕಾರ್ಯದರ್ಶಿ ಬಸವರಾಜ ಅಣ್ಣಿಗೇರಿ, ನೌಕರಿ ಸಂಘದ ಸದಸ್ಯ ಎಸ್.ಎಸ್. ಪಸಾರದ ಅವರನ್ನು ಸನ್ಮಾನಿಸಲಾಯಿತು.
ಉತ್ತರ ವಲಯದ ಸಿ.ಆರ್.ಪಿ ಕಾಲೇಶ ವನ್ನಾಲ, ರಾಜೂರು ಕ್ಲಸ್ಟರ್ ಸಿ.ಆರ್.ಪಿ ಎಮ್.ಯು. ಗೋಡೆಕಾರಣ, ಎಸ್.ಆರ್. ಅಂಗಡಿ, ಎಸ್.ಟಿ. ಪೂಜಾರ, ಎಚ್.ವಿ. ಕಂಬಳಿ, ಸುಮಿತ್ರಾ ಟಿ, ಎನ್.ಎ. ಅಮಟೆ, ಜಿ.ಡಿ. ಕಳ್ಳಿಮನಿ, ಬಸವರಾಜ ಮನವಟ್ಟಗಿ, ರವೀಂದ್ರ ಕವಡಿಮಟ್ಟಿ, ಎಚ್.ಆರ್. ನಿಡಗುಂದಿ, ಕೆ.ಐ. ವಸ್ತಾದ, ವಿನಾಯಕ ಕರ್ಣೆ, ಸುಜಾತಾ ದಿವಾಣದ, ಪ್ರಿಯಾಂಕ ನಾಯಕ, ಎಸ್.ಆರ್. ನೀಲೂರ, ಕಿರಣ ನಿಡಗುಂದಿ ಮುಂತಾದವರಿದ್ದರು.



