ವಿಜಯಸಾಕ್ಷಿ ಸುದ್ದಿ, ಗದಗ: ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ನಿರ್ಮಾಣ ಮಾಡಿರುವ `ಕಲ್ಟ್’ ಚಿತ್ರವನ್ನು ಗೆಲ್ಲಿಸಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಚಿತ್ರ 2026ರ ಜನವರಿ 23ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಾಯಕ ನಟ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ತಿಳಿಸಿದರು.
ಸೋಮವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಲ್ಟ್’ ಚಿತ್ರವು ಖಂಡಿತ ಹಿಟ್ ಆಗಲಿದೆ. ಚಿತ್ರದ ಶೇ. 40ರಷ್ಟು ಭಾಗವನ್ನು ಹಂಪಿ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದ ನಾಯಕಿ ರಚಿತಾರಾಮ್ ಅವರ ಸ್ವಂತ ಊರು ಹಂಪಿ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ. ಇನ್ನು ಕ್ಲೈಮಾಕ್ಸ್, ಹಾಡುಗಳನ್ನು ಕೂಡ ಹಂಪಿಯಲ್ಲೇ ಚಿತ್ರೀಕರಿಸಲಾಗಿದೆ. ಬಾಲಿವುಡ್ ನಟಿ ಮಲೈಕಾ ಕೂಡಾ ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದರು.
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಲೋಕಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ಕಲ್ಟ್’ ಚಿತ್ರವನ್ನು ಅನಿಲ ಕುಮಾರ ನಿರ್ದೇಶಿಸಿದ್ದಾರೆ. ಜೆ.ಎಸ್. ವಾಲಿ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಂ. ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಆರಂಭದಿಂದು ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಈ ಚಿತ್ರ ಖಂಡಿತ ಯಶಸ್ಸು ಕಾಣುವ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಜೀರ್ ಅಹ್ಮದ್ ಡಂಬಳ, ಕೃಷ್ಟಾ, ಸಾದಿಕ್ ನರಗುಂದ, ಅಂದಾನಯ್ಯ ಕುರ್ತಕೋಟಿಮಠ ಸೇರಿದಂತೆ ಇತರರು ಇದ್ದರು.
ರಾಜಕೀಯ ಒಲ್ಲೆ: ಭವಿಷ್ಯದಲ್ಲಿ ಸಿನಿಮಾ ಜೊತೆಗೆ ರಾಜಕೀಯಕ್ಕೂ ಪ್ರವೇಶಿಸುವ ಇಚ್ಛೆಯಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಝೈದ್ ಖಾನ್, ನನ್ನ ತಂದೆ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ. ಆದರೆ ನನಗೆ ರಾಜಕೀಯ ಇಷ್ಟವಿಲ್ಲ. ಉದ್ಯಮ, ಸಿನಿಮಾ ಕ್ಷೇತ್ರದಲ್ಲಿ ಇದ್ದುಕೊಂಡೇ ಸಮಾಜ ಸೇವೆ ಮಾಡುವೆ ಎಂದು ಉತ್ತರಿಸಿದರು.



