ವಿಜಯಸಾಕ್ಷಿ ಸುದ್ದಿ, ಗದಗ: ವಿಧಾನಸೌಧದಲ್ಲಿ ಕಾನೂನು ಸಚಿವರಾದ ಎಚ್.ಕೆ. ಪಾಟೀಲರನ್ನು ಭೇಟಿ ಮಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತ್ವದ ನಿಯೋಗ ಕನ್ನಡಪರ ಹೋರಾಟಗಾರರ ಮೇಲಿರುವ ಪ್ರಕರಣ ವಾಪಸ್ ಪಡೆಯುವಂತೆ ಮನವಿ ಮಾಡಿತ್ತು. ಹೋರಾಟಗಾರರ ವಿರುದ್ಧ ನಡೆದಿರುವ ಅನೇಕರ ಬಂಧನ, ಕೋರ್ಟ್ ಪ್ರಕ್ರಿಯೆಗಳು ಮತ್ತು ಕಾನೂನು ಒತ್ತಡಗಳು, ಕರ್ನಾಟಕದ 31 ಜಿಲ್ಲೆಗಳಲ್ಲಿ ಕನ್ನಡಪರ ಹೋರಾಟಗಾರರ ಮೇಲಿರುವ ಪ್ರಕರಣಗಳನ್ನು ಸಚಿವರಿಗೆ ವಿವರಿಸಿದರು.
ನಿಯೋಗದ ಮನವಿ ಆಲಿಸಿದ ಸಚಿವರು, ಪ್ರಕರಣಗಳನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕಾನೂನು ಪ್ರಕಾರ ವಾಪಸ್ ಪಡೆಯುವತ್ತ ಸರ್ಕಾರ ಮುಂದಾಗಲಿದೆ ಎಂದು ಭರವಸೆ ನೀಡಿದರು. ಈ ವೇಳೆ ಸಚಿವ ಸತೀಶ ಜಾರಕಿಹೊಳಿ ಇದ್ದರು. ಉತ್ತರ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಪದಾಧಿಕಾರಿಗಳು, ಕರವೇ ಮುಖಂಡರುಗಳು ನಿಯೋಗದಲ್ಲಿದ್ದರು ಎಂದು ಕರವೇ ಗದಗ ತಾಲೂಕಾಧ್ಯಕ್ಷ ಮುತ್ತಣ್ಣ ಚವಡಣ್ಣವರ ತಿಳಿಸಿದ್ದಾರೆ.



