ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಪ್ರತಿಯೊಬ್ಬರಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರದರ್ಶಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೆಹಬೂಬ ತುಂಬರಮಟ್ಟಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಕಲಾ ಪ್ರತಿಭೋತ್ಸವ-2025 ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಪ್ರಸ್ತಾವಿಕವಾಗಿ ಮಾತನಾಡಿ, ಗದಗ ಸಂಗೀತ, ಸಾಹಿತ್ಯ, ಕಲೆಯ ತವರೂರು. ಇಂತಹ ಐತಿಹಾಸಿಕ ಹಿನ್ನೆಲೆಯಿರುವ ಗದುಗಿನ ನೆಲದಲ್ಲಿ ನಡೆಯುವ ಸಂಗೀತ, ಸಾಹಿತ್ಯ, ಕಲೆ, ಚಿತ್ರಕಲೆ ಇವುಗಳಿಗೆ ವಿಶೇಷ ಆದ್ಯತೆಯಿರುವುದು ಈ ನೆಲದ ಪುಣ್ಯ. ಇಂತಹ ಸ್ಥಳದಲ್ಲಿ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಕಲಾ ಪ್ರತಿಭೋತ್ಸವ ಏರ್ಪಡಿಸಲು ಅವಕಾಶ ನೀಡಿದ್ದು ವಿಶೇಷ ಎನಿಸುತ್ತದೆ.
ಈ ದಿನ ಸೋತವರು ನಾಳೆಯ ದಿನ ಗೆದ್ದೇ ಗೆಲ್ಲುತ್ತಾರೆ ಎಂಬುದನ್ನು ಮನಗಾಣಬೇಕು. ಸ್ಪರ್ಧೆ ಮಾಡುವ ಮನಸ್ಥಿತಿಯವರು ನಿಜಕ್ಕೂ ಬದುಕಿನುದ್ದಕ್ಕೂ ಖುಷಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ನಮ್ಮ ವಿಜ್ಞಾನ ಸಾಕ್ಷ್ಯೀಕರಿಸುತ್ತದೆ. ಮಾನಸಿಕ ನೆಮ್ಮದಿಗೆ ಇಂತಹ ಕಲಾ ಪ್ರತಿಭೋತ್ಸವ ಬಹಳಷ್ಟು ಯುವಕರಲ್ಲಿ ಮಹತ್ವವನ್ನು ತಂದುಕೊಡಲು ಸಾಧ್ಯವಾಗುತ್ತದೆ. ಸ್ಪರ್ಧಾಳುಗಳು ಸ್ಪರ್ಧಿಸಿ ಜಯಶಾಲಿಗಳಾಗಿ ಇಲಾಖೆ ಮತ್ತು ಗದುಗಿನ ಕೀರ್ತಿಯನ್ನು ಹೆಚ್ಚಿಸಲೆಂದು ಶುಭ ಹಾರೈಸಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಶಂಕರಪ್ಪ ಆರ್. ಸಂಕಣ್ಣವರ ಮಾತನಾಡಿ, ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಕರ್ನಾಟಕ ಬಂಜಾರಾ ಅಕಾಡೆಮಿ ಸದಸ್ಯೆ ಸಾವಿತ್ರಿ ಲಮಾಣಿ, ಹಿರಿಯ ಸಾಹಿತಿ ಐ.ಕೆ. ಕಮ್ಮಾರ, ಅಂದಾನಪ್ಪ ವಿಭೂತಿ, ಮೌನೇಶ ಬಡಿಗೇರ, ಸಂಗೀತಗಾರ ವೀರೇಶ ಕಿತ್ತೂರು ಇದ್ದರು.
ಗದಗ ಜಿಲ್ಲೆಯು ಸಂಗೀತ ದಿಗ್ಗಜರಾದ ಪಂ. ಪುಟ್ಟರಾಜ ಗವಾಯಿಗಳು, ಭಾರತರತ್ನ ಪುರಸ್ಕೃತ ಡಾ. ಪಂಡಿತ ಭೀಮಸೇನ ಜೋಶಿ ಸೇರಿದಂತೆ ಅನೇಕ ಸಂಗೀತಗಾರರು, ಕವಿಗಳು, ಸಾಹಿತಿಗಳು, ಕಲಾವಿದರು ಈ ಜಿಲ್ಲೆಯವರಾಗಿದ್ದಾರೆ. ಆಸಕ್ತಿ ಇದ್ದವರಲ್ಲಿ ಮಾತ್ರ ಪ್ರತಿಭೆ ಅರಳುತ್ತದೆ. ಸ್ಪರ್ಧಾಳುಗಳು ಸ್ಪರ್ಧೆಯಲ್ಲಿ ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದು ಮೆಹಬೂಬ ತುಂಬರಮಟ್ಟಿ ಕರೆನೀಡಿದರು.



