ವಿಜಯಸಾಕ್ಷಿ ಸುದ್ದಿ, ಹೊಸನಗರ: ಮಕ್ಕಳಿಗೆ ಭೌತಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಶಿಕ್ಷಣವೂ ಬೇಕು. ಬಾಲ್ಯದಲ್ಲಿ ವಿದ್ಯೆ, ಯೌವನದಲ್ಲಿ ಸಂಪತ್ತು ಇವೆರಡೂ ಬದುಕಿಗೆ ಎಷ್ಟು ಅವಶ್ಯವೋ, ಮಕ್ಕಳಿಗೆ ನೀತಿ ಶಿಕ್ಷಣವೂ ಅಷ್ಟೇ ಅವಶ್ಯವೆಂದು ಮಳಲಿ ಸಂಸ್ಥಾನ ಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನುಡಿದರು.
ಅವರು ಗುರುವಾರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಶ್ರೀ ರಾಮಕೃಷ್ಣ ವಿದ್ಯಾಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾನವ ಜನ್ಮ ಬಹಳ ಶ್ರೇಷ್ಠವಾದದ್ದು. ಅನೇಕ ಜನ್ಮಗಳ ಪುಣ್ಯದ ಫಲವೇ ಮಾನವ ಜನ್ಮವಾಗಿದೆ. ಆದ್ದರಿಂದ ಸತ್ಯಂ ವದ, ಧರ್ಮಂ ಚರ ಎಂಬ ಮಾತುಗಳನ್ನು ಮರೆಯದೇ ಬದುಕಿ ಬಾಳಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಧರ್ಮ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆಯುವ ಅವಶ್ಯಕತೆ ಇದೆ. ಧರ್ಮ ಜೀವನದ ಭದ್ರ ಬುನಾದಿಯಾಗಿದೆ ಎಂದರು.
ಸಮಾರಂಭದಲ್ಲಿ ಶಾಲಾ ಮುಖ್ಯಸ್ಥರಾದ ಡಿ.ಎಂ. ದೇವರಾಜ್, ಗಣಪತಿ, ಬಸವರಾಜಗೌಡ್ರು ಉಪಸ್ಥಿತರಿದ್ದರು. ಸರಿತಾ ದೇವರಾಜ್ ಸ್ವಾಗತಿಸಿದರು. ಪೂರ್ವಿಕಾ ಹಾಗೂ ಹರ್ಷಾ ನಿರೂಪಿಸಿದರು. ಮುಖ್ಯ ಶಿಕ್ಷಕ ಕರುಣಾಕರ ವಂದಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.



