ಕೇವಲ 11 ವರ್ಷದ ಬಾಲಕನಾಗಿದ್ದಾಗ ಗುರು ಪುಟ್ಟರಾಜರ ಸಾನ್ನಿಧ್ಯ ಸೇರಿ, ಅಪ್ಪಟ ಗುರುಕುಲ ಮಾದರಿಯ ಸಂಗೀತ ಅಧ್ಯಯನ ಮಾಡಿ, ಬೆಟ್ಟವಾಗಿ ಬೆಳೆಯುತ್ತಿರುವ ಸದ್ವಿನಯ ಸಂಪನ್ನ ಗಾಯಕ ಪಂ. ವೆಂಕಟೇಶ್ ಆಲ್ಕೋಡ್ ನಮ್ಮ ನಾಡಿನ ಹೆಮ್ಮೆಯ ಗಾಯಕರು.
ಗುರು ಪುಟ್ಟರಾಜರ ನೇರ ಶಿಷ್ಯತ್ವ ವಹಿಸಿಕೊಂಡು, ಸತತ 10 ವರ್ಷಗಳ ಕಾಲ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ ವೆಂಕಟೇಶ್ ಆಲ್ಕೋಡ್, ಅತ್ಯಂತ ಹಿಂದುಳಿದ ದೇವದುರ್ಗ ತಾಲೂಕಿನ ಪುಟ್ಟ ಹಳ್ಳಿಯ ಅಪ್ಪಟ ಗ್ರಾಮೀಣ ಪ್ರತಿಭೆ. ಆಕಾಶವಾಣಿ `ಎ’ ಶ್ರೇಣಿಯ ಕಲಾವಿದರಾಗಿ ಮಾನ್ಯತೆ ಪಡೆದುಕೊಂಡ ಈ ಯುವ ಕಲಾವಿದ ತಮ್ಮ ಪ್ರತಿಭೆಯ ಮೂಲಕವೇ ಅನೇಕ ವೇದಿಕೆಗಳನ್ನು ಸಂಪಾದಿಸಿಕೊಂಡು, ರಾಜ್ಯ, ದೇಶ-ವಿದೇಶದ ವೇದಿಕೆಗಳಲ್ಲಿ ತಮ್ಮ ಶುದ್ಧ ಶಾಸ್ತ್ರೀಯ ಸಂಗೀತ, ದಾಸವಾಣಿ, ವಚನ ಗಾಯನದ ಮೂಲಕ ಅಪಾರ ಸಂಗೀತ ಪ್ರೇಮಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ವೆಂಕಟೇಶ್ ಆಲ್ಕೋಡ್‌ರ ಕಂಠಸಿರಿಯಲ್ಲಿ ದಾಸರ ಪದಗಳನ್ನು ಕೇಳುವುದೇ ಒಂದು ವಿಶಿಷ್ಟ ಅನುಭವ. ಇವರು ಗಾಯಕ ಮಾತ್ರವಾಗಿರದೇ ಒಬ್ಬ ಗುರುವಾಗಿ, ಗುರು ಕೊಟ್ಟ ವಿದ್ಯೆಯನ್ನು ಉಚಿತವಾಗಿ ಅನೇಕ ಪ್ರತಿಭೆಗಳಿಗೆ ಧಾರೆಯೆರೆಯುತ್ತಿದ್ದಾರೆ. ಹೀಗಾಗಿ ಇವರಿಗೆ ಯುವ ಕಲಾ ಗುರು ಪ್ರಶಸ್ತಿ ಸಂದಿರುವುದು ಅತ್ಯಂತ ಅರ್ಥಪೂರ್ಣ.
ಇವರು ಸಂಗೀತ ನಿರ್ದೇಶಕರಾಗಿ ಸುಮಾರು 30 ಧ್ವನಿ ಅಡಕಗಳಿಗೆ ಧ್ವನಿಯಾದ್ದಾರಲ್ಲದೆ, ಹತ್ತಾರು ಧ್ವನಿ ಅಡಕಗಳಿಗೆ ಸಂಗೀತ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ಸರ್ಕಾರದ ಡಾ. ಪಂ. ಮಲ್ಲಿಕಾರ್ಜುನ್ ಮನ್ಸೂರ್ ಯುವ ಪ್ರಶಸ್ತಿ ಪ್ರತಿಭಾ ಕಿರೀಟಕ್ಕೆ ಸೇರಿದ ಪ್ರತಿಷ್ಠಿತ ಗರಿಯಾಗಿದೆ. ‘ಭಾರತರತ್ನ’ ಪಂ. ಭೀಮಸೇನ್ ಜೋಶಿ ಪ್ರಶಸ್ತಿ ಇವರ ಶುದ್ಧ ಶಾಸ್ತ್ರೀಯ ಸಂಗೀತಕ್ಕೆ ಸಂದ ಗೌರವವಾಗಿದೆ. ಬೆಂಗಳೂರಿನಲ್ಲಿ ಸ್ವರ ಸಂಸ್ಕಾರ ಸಂಸ್ಥೆ ಸ್ಥಾಪಿಸಿ ಅನೇಕ ಪ್ರತಿಭೆಗಳಿಗೆ ವೇದಿಕೆ ನೀಡಿ ಪ್ರೋತ್ಸಾಹಿಸುತ್ತಿರುವ ವಿಶಿಷ್ಟ ಗುಣದ ಸಂಘಟನಾ ಚತುರರೂ ಹೌದು.
ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಮೈಸೂರು ದಸರಾ ಉತ್ಸವ, ನಾಗಪುರ ಉತ್ಸವ, ಬೆಂಗಳೂರಿನ ಹರಿದಾಸರ ಹಬ್ಬ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಮತ್ತು ದೇಶ-ವಿದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ವಚನ ಸಂಗೀತ, ಕನ್ನಡದ ಭಾವಗೀತೆ ಹಾಡಿ ಹೌದೆನಿಸಿಕೊಂಡಿದ್ದಾರೆ.
ಇಂದು ಕಲಾ ವಿಕಾಸ ಪರಿಷತ್ತಿನ ರಜತ ಮಹೋತ್ಸವ ಸಂಭ್ರಮದ ಐದನೇ ಕಾರ್ಯಕ್ರಮವಾಗಿ ಆಯೋಜಿಸಲಾಗಿರುವ `ನಾಡದೇವಿಗೆ ನಮನ’ ಸಂಗೀತ ಮತ್ತು ಸಾಹಿತ್ಯ ಸಂಭ್ರಮದ ಸಮಾರಂಭದಲ್ಲಿ ಅವಳಿ ನಗರದ ಸಂಗೀತ ಆಸಕ್ತರಿಗೆ ಇವರು ಸಂಗೀತದ ರಸದೌತಣ ಉಣಬಡಿಸಲಿದ್ದಾರೆ.
ರಾಘವೇಂದ್ರ ಕ್ಷತ್ರಿಯ, ತನ್ನ ಐದನೇ ವಯಸ್ಸಿನಲ್ಲಿಯೇ ಕೊಳಲು ಹಿಡಿದ ಬಾಲಕ. ಖ್ಯಾತ ಕಲಾವಿದ, ತಂದೆ ಕೃಷ್ಣಾಜಿ ಇವರ ಮಂಗಳವಾದ್ಯ (ಶಹನಾಯಿ) ಸಂಗೀತ ಕೇಳುತ್ತಾ ಬೆಳೆದ ಕಿನ್ನರ. ಮಗನ ಸಂಗೀತ ಆಸಕ್ತಿ ಗುರುತಿಸಿದ ತಂದೆ ಕೃಷ್ಣಾಜಿ ಲಕ್ಷ್ಮೇಶ್ವರದ ಖ್ಯಾತ ಗಾಯಕ ಎಂ. ಸಂತೂಬಾಳು ಇವರಲ್ಲಿ 7 ವರ್ಷ ಪ್ರಾಥಮಿಕ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟರು. ಮುಂದೆ ವಿದುಷಿ ಮುಕ್ತಾ ಕುಲಕರ್ಣಿ ಇವರಲ್ಲಿ 5 ವರ್ಷ ಶಹನಾಯಿ ಘರಾಣೆಯಲ್ಲಿ ಅಧ್ಯಯನ ಮಾಡಿ ವಿದ್ವತ್ತು ಮತ್ತು ಭೂಷಣ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಈಗ ಹೆಚ್ಚಿನ ವಿದ್ಯಾಭ್ಯಾಸವನ್ನು ಕಿರಣ ಧಾರಣೆಯ ಖ್ಯಾತ ಬಾನ್ಸುರಿ ವಾದಕ, ಕಲಬುರಗಿ ಆಕಾಶವಾಣಿ ನಿಲಯದ ಕಲಾವಿದರಾದ ಶೇಖ್ ಅಬ್ದುಲ್ ಖಾಜಿ ಇವರಲ್ಲಿ ಕಿರಾಣಾ ಘರಾಣೆಯಲ್ಲಿ ತಮ್ಮ ಕಲಿಕೆಯನ್ನು ಮುಂದುವರಿಸಿರುವ ಉದಯೋನ್ಮುಖ ಕಲಾವಿದ ರಾಘವೇಂದ್ರ ನಮ್ಮ ಗದಗ ಜಿಲ್ಲೆಯ ಹೆಮ್ಮೆಯ ಪ್ರತಿಭೆ. ಹಂಪಿ ಉತ್ಸವ, ಲಕ್ಕುಂಡಿ ಉತ್ಸವ, ಆನೆಗುಂದಿ ಉತ್ಸವ, ಪಾಂಡುರಂಗ ದಿಂಡಿ ಉತ್ಸವ ಹೀಗೆ ಅನೇಕ ಪ್ರತಿಷ್ಠಿತ ಉತ್ಸವಗಳಲ್ಲಿ ತಮ್ಮ ಸುರೇಲಿ ವಾದನದ ಮೂಲಕ ಜನಮನ ಗೆಲ್ಲುತ್ತಿದ್ದಾರೆ. ಈಗ ಬೆಂಗಳೂರು ನಿವಾಸಿಯಾದ ನಮ್ಮ ಹೆಮ್ಮೆಯ ಪುಲಿಗೆರೆಯ (ಲಕ್ಷ್ಮೇಶ್ವರ) ಪ್ರತಿಭೆ. ಡಿ. 14ರಂದು ಸಂಜೆ 6 ಗಂಟೆಗೆ ವಿವೇಕಾನಂದ ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಹಮ್ಮಿಕೊಂಡಿರುವ ಕಲಾ ವಿಕಾಸ ಪರಿಷತ್‌ನ ರಜತ ಸಂಭ್ರಮದ ವರ್ಷಾಚರಣೆಯ 5ನೇ ಕಾರ್ಯಕ್ರಮವಾದ `ನಾಡದೇವಿಗೆ ನಮನ’ ಸಮಾರಂಭದ ಸಂಗೀತ ಕಾರ್ಯಕ್ರಮದಲ್ಲಿ ಅವಳಿ ನಗರದ ಸಂಗೀತ ಪ್ರೇಮಿಗಳಿಗೆ ಬಾನ್ಸುರಿ ವಾದನದ ಮೂಲಕ ನಾದಾಭಿಷೇಕ ಮಾಡಿಸಲಿದ್ದಾರೆ.



