ಮಡಿಕೇರಿ: ಫೇಸ್ಬುಕ್ನಲ್ಲಿ ಪರಿಚಯವಾದ ಯುವತಿಯನ್ನು ಭೇಟಿ ಮಾಡಲು ಮಡಿಕೇರಿಗೆ ಬಂದಿದ್ದ ಮಂಡ್ಯ ಮೂಲದ ಯುವಕನಿಗೆ ಭಯಾನಕ ಅನುಭವ ಎದುರಾಗಿದೆ.
ಯುವತಿಯನ್ನು ಭೇಟಿಯಾದ ನೆಪದಲ್ಲಿ ಮಡಿಕೇರಿಯ ಖಾಸಗಿ ಹೋಂ ಸ್ಟೇಗೆ ಕರೆಸಿ ಬಂಧಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ಬೆಳಕಿಗೆ ಬಂದಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಹದೇವ್ಗೆ ಇತ್ತೀಚೆಗೆ ಫೇಸ್ಬುಕ್ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಆಕೆಯ ಆಹ್ವಾನದಂತೆ ಶುಕ್ರವಾರ ಸಂಜೆ ಮಡಿಕೇರಿಗೆ ಬಂದಿದ್ದ ಮಹದೇವ್, ಒಂಟಿಯಾಗಿ ಮಡಿಕೇರಿ ನಗರದಲ್ಲಿರುವ ಮಂಗಳಾದೇವಿ ನಗರದಲ್ಲಿನ ಮನೆಯೊಂದಕ್ಕೆ ತೆರಳಿದ್ದಾನೆ.
ಅಲ್ಲಿ ಕೆಲ ಕಾಲ ಯುವತಿಯೊಂದಿಗೆ ಮಾತನಾಡಿ, ಡ್ರಿಂಕ್ಸ್ ಸೇವನೆ ಮಾಡಿದ್ದು, ಮಡಿಕೇರಿಯ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ನಡುವೆ ಯುವತಿಗೆ ಫೋನ್ ಕರೆ ಬಂದಿದ್ದು, ಸಂಬಂಧಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ಹೇಳಿ ಆಕೆ ಅಲ್ಲಿಂದ ಹೊರಟಿದ್ದಾಳೆ. ಅದೇ ಸಮಯದಲ್ಲಿ ಕೋಣೆಗೆ ನುಗ್ಗಿದ ಮೂವರು ಯುವಕರು ಮಹದೇವ್ ಬಳಿ ಇದ್ದ ಹಣ ಹಾಗೂ ವಸ್ತುಗಳನ್ನು ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ.
ಅವರಿಂದ ಭಾರೀ ಮೊತ್ತದ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಯಾವುದೋ ರೀತಿಯಲ್ಲಿ ತಪ್ಪಿಸಿಕೊಂಡ ಮಹದೇವ್ ಮನೆ ಹೊರಗೆ ಬಂದಿದ್ದಾನೆ. ಆದರೂ ಆತನನ್ನು ಬೆನ್ನಟ್ಟಿದ ಆರೋಪಿಗಳು ಆಟೋದಲ್ಲಿ ಅಪಹರಣ ಮಾಡಲು ಯತ್ನಿಸಿದ್ದು, ಈ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಮೂವರಿಂದ ಪಾರಾದ ಮಹದೇವ್ ಅರೆಬೆತ್ತಲಾಗಿ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಓಡೋಡಿ ಬಂದು ದೂರು ದಾಖಲಿಸಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳದಿಂದ ಹಲ್ಲೆಗೆ ಬಳಸಲು ಸಿದ್ಧಪಡಿಸಿದ್ದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಹನಿಟ್ರ್ಯಾಪ್ ಪ್ರಕರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಪ್ರಕರಣದ ರೂವಾರಿಯಾದ ರಚನಾ ಮಡಿಕೇರಿ ನಗರದ ಅಶೋಕಪುರ ನಿವಾಸಿಯಾಗಿದ್ದು, ಈಕೆ ಹಿಂದೆಯೇ ಪೊಲೀಸ್ ಪೇದೆಯೊಬ್ಬರೊಂದಿಗೆ ವಿವಾಹವಾಗಿದ್ದಳು. ಕುಡಿತದ ಚಟದ ಕಾರಣ ಗಂಡ ಬೇಸತ್ತು ವಿಚ್ಛೇದನ ನೀಡಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.



