ಬೆಂಗಳೂರು:- ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ–2025 ಅನ್ನು ತಕ್ಷಣ ಮಂಡಿಸಬೇಕು ಎಂಬ ಬೇಡಿಕೆಯನ್ನು ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳು ಹಲವು ವರ್ಷಗಳಿಂದ ಮುಂದಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ನಿವಾಸಿಗಳ ಬೇಡಿಕೆಗಳನ್ನು ಆಲಿಸಲು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಸಂವಾದ ನಡೆಸಿದರು. ಸಭೆಯಲ್ಲಿ ಬಂದ ಎಲ್ಲ ಸಲಹೆಗಳನ್ನು ಪರಿಶೀಲಿಸಿ ವಿಧೇಯಕ ಮಂಡಿಸುವುದಾಗಿ ಅವರು ಭರವಸೆ ನೀಡಿದರು. ಆದರೆ ಈ ವೇಳೆ ಎಚ್ಚರಿಕೆಯ ಮಾತನ್ನೂ ಆಡಿದರು.
ಸಂವಾದದ ವೇಳೆ ಡಿಕೆ ಶಿವಕುಮಾರ್ ವೇದಿಕೆ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್‌ನ ಪದಾಧಿಕಾರಿ ಕಿರಣ್ ಹೆಬ್ಬಾರ್ ಬರೆದಿದ್ದ ಪತ್ರದ ಕುರಿತು ಪ್ರತಿಕ್ರಿಯಿಸಿದ ಅವರು, “ನಾನು ಪ್ರಧಾನಿಗೂ ಹೆದರಿಲ್ಲ. ಬ್ಲಾಕ್‌ಮೇಲ್ ತಂತ್ರಗಳಿಗೆ ಹೆದರುವವನಲ್ಲ. ಹುಷಾರ್” ಎಂದು ಕಠಿಣ ಎಚ್ಚರಿಕೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಿರಣ್ ಹೆಬ್ಬಾರ್, ತಾವು ಯಾವುದೇ ರೀತಿಯ ಧಮ್ಕಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು. ಡಿಕೆ ಶಿವಕುಮಾರ್ ಭಾಷಣದ ಶೈಲಿಗೆ ಉದ್ಯಮಿ ಮೋಹನ್ ದಾಸ್ ಪೈ ಸೇರಿದಂತೆ ವಿಪಕ್ಷ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮೋಹನ್ ದಾಸ್ ಪೈ, “ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಸಚಿವರನ್ನು ಪ್ರಶ್ನಿಸುವ ಹಕ್ಕು ಜನರಿಗೆ ಇದೆ. ಈ ರೀತಿಯ ಮಾತುಗಳು ಭಯ ಹುಟ್ಟಿಸುವಂತಿದ್ದು ತಪ್ಪು” ಎಂದು ಟೀಕಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಡಿಕೆ ಶಿವಕುಮಾರ್ ನಡೆಗೆ ಕಿಡಿಕಾರಿದ್ದಾರೆ.



