ವಿಜಯಸಾಕ್ಷಿ ಸುದ್ದಿ, ಧಾರವಾಡ: 2025-26ನೇ ಸಾಲಿನ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಜಿಲ್ಲೆಯಲ್ಲಿ ಸೆಪ್ಟೆಂಬರ್ 22, 2025ರಿಂದ ಅಕ್ಟೋಬರ್ 31, 2025ರವರೆಗೆ ಜರುಗಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಗಣತಿದಾರರಿಗೆ, ಮೇಲ್ವಿಚಾರಕರಿಗೆ ತರಬೇತಿ ನೀಡಿದ ರಾಜ್ಯಮಟ್ಟದ (ಮಾಸ್ಟರ್) ತರಬೇತಿದಾರರಿಗೆ ಗೌರವಧನವನ್ನು ಪಾವತಿ ಮಾಡುವ ಕಾರ್ಯ ಡಿಸೆಂಬರ್ 12ರಿಂದ ಆರಂಭವಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೇರವಾಗಿ ಗೌರವಧನ ಪಾವತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಮೀಕ್ಷೆದಾರರ ಮೇಲೆ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿದ ಒಟ್ಟು 395 ಜನ ಮೇಲ್ವಿಚಾರಕರಿಗೆ ತಲಾ 10 ಸಾವಿರ ರೂ.ಗಳಂತೆ ಒಟ್ಟು 39,50,000 ರೂ.ಗಳು ಬಿಡುಗಡೆಯಾಗಿದೆ. ಎಲ್ಲಾ ಮೇಲ್ವಿಚಾರಕರ ರೆಸಿಪಿಯಂಟ್ ಐ.ಡಿಗಳನ್ನು ಪಡೆಯಲಾಗಿದ್ದು, ಸದರಿಯವರಿಗೆ ಗೌರವಧನವನ್ನು ಪಾವತಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಒಟ್ಟು 4,884 ಸಮೀಕ್ಷಾದಾರರಿಗೆ ಸಮೀಕ್ಷೆ ಕೈಗೊಂಡಿರುವ ಮನೆಗಳಿಗನುಗುಣವಾಗಿ ಗೌರವಧನ ಪಾವತಿಸಲು ರೂ.4,40,46,700 ಬಿಡುಗಡೆಯಾಗಿದ್ದು, ಎಲ್ಲಾ ಗಣತಿದಾರರ ರೆಸಿಪಿಯಂಟ್ ಐ.ಡಿಗಳನ್ನು ಪಡೆಯಲಾಗುತ್ತಿದೆ. ರೆಸಿಪಿಯಂಟ್ ಐ.ಡಿ ಒದಗಿಸಿರುವ 1,525 ಗಣತಿದಾರರಿಗೆ ಒಟ್ಟು ರೂ.1,57,62,500ಗಳನ್ನು ಪಾವತಿಸಲು ಈಗಾಗಲೇ ಕ್ರಮ ವಹಿಸಲಾಗಿದೆ. ಉಳಿದ ಎಲ್ಲ ಗಣತಿದಾರರಿಗೂ ಗೌರವಧನ ಜಮಾ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯಲ್ಲಿ ಗಣತಿದಾರರಿಗೆ, ಮೇಲ್ವಿಚಾರಕರಿಗೆ ತರಬೇತಿ ನೀಡಿದ 92 ಜನ (ಮಾಸ್ಟರ್) ತರಬೇತಿದಾರರಿಗೆ 4,72,500 ರೂ.ಗಳ ಗೌರವಧನವನ್ನು ಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 4,886 ಬ್ಲಾಕ್ಗಳನ್ನು ಸೃಜಿಸಲಾಗಿದ್ದು, ಪ್ರತಿ ಬ್ಲಾಕ್ಗೆ ತಲಾ ರೂ.5,000ಗಳಂತೆ ಒಟ್ಟು ರೂ.2,44,25,000 ಬಿಡುಗಡೆಯಾಗಿದ್ದು, ಸಂಬಂಧಪಟ್ಟ ಬ್ಲಾಕ್ಗಳಲ್ಲಿ ಕಾರ್ಯನಿರ್ವಹಿಸಿದ ಗಣತಿದಾರರಿಗೆ ಸದರಿ ಗೌರವಧನವನ್ನು ಪಾವತಿಸಬೇಕಾಗಿದೆ. ಆ ಬ್ಲಾಕ್ಗಳಲ್ಲಿ ಸಮೀಕ್ಷಾ ಕಾರ್ಯ ನಿರ್ವಹಿಸಿರುವ ಗಣತಿದಾರರ ಬ್ಲಾಕ್ವಾರು ಮಾಹಿತಿಗಳನ್ನು ಪಡೆಯುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



