ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ರಾಜ್ಯ ಸರ್ಕಾರ ದ್ವೇಷ ಭಾಷಣ ತಡೆಯಲು `ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ’ವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು ಸ್ವಾಗತಾರ್ಹವಾಗಿದೆ. ಈ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಂಡು ದ್ವೇಷ ಕಾರುವವರ ಮೇಲೆ ಕಠಿಣ ಶಿಕ್ಷೆಯಾಗಲಿ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ, ವಕೀಲ ತಾಹೇರ್ ಹುಸೇನ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತಡವಾಗಿಯಾದರೂ ರಾಜ್ಯ ಸರ್ಕಾರ ಇಂತಹ ದ್ವೇಷ ಭಾಷಣದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿರುವುದು ಶ್ಲಾಘನೀಯ. ಈ ಕಾಯ್ದೆಯ ಅಡಿಯಲ್ಲಿ ಮೊದಲ ಬಾರಿ ತಪ್ಪಿಗೆ 7 ವರ್ಷ ಜೈಲು, 50 ಸಾವಿರ ರೂ ದಂಡ, ಪುನರಾವರ್ತನೆ ಆದರೆ 10 ವರ್ಷ ಜೈಲು, 1 ಲಕ್ಷ ರೂ ದಂಡ ವಿಧಿಸಲಾಗುತ್ತದೆ. ಇದು ನೋಂದಾಯಿತ ಹಾಗೂ ನೋಂದಾಯಿತವಲ್ಲದ ಸಂಘಟನೆಗಳಿಗೂ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಈ ಮಸೂದೆಗೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡುವುದಾಗಿ ಬೆದರಿಕೆ ಹಾಕುತ್ತಿರುವುದು ಖಂಡನೀಯ. ಇವರ ವಿರೋಧದ ನಿಲುವು ನೋಡಿದರೆ ಸಮಾಜದಲ್ಲಿ ಶಾಂತಿ ನೆಲೆಸುವುದು ಇವರಿಗೆ ಇಷ್ಟವಿಲ್ಲ ಎಂದು ತೋರುತ್ತದೆ. ಪ್ರತಿಯೊಂದಕ್ಕೂ ವಿರೋಧಿಸುವ ಬಿಜೆಪಿ ನಾಯಕರು ದ್ವೇಷ ಭಾಷಣದ ವಿರುದ್ಧ ಕಾಯ್ದೆಗೂ ವಿರೋಧ ಮಾಡುತ್ತಿದ್ದು ಜನರ ಮುಂದೆ ಬೆತ್ತಲಾಗಿದ್ದಾರೆ. ವಿಪಕ್ಷಗಳ ಯಾವುದೇ ಒತ್ತಡಕ್ಕೆ ಆಸ್ಪದ ನೀಡದೇ ರಾಜ್ಯ ಸರ್ಕಾರ ಕಾಯ್ದೆ ಜಾರಿಗೊಳಿಸಿ ಸಮಾಜದಲ್ಲಿ ಶಾಂತಿ ನೆಲೆಸಲು ಮುಂದಾಗಲಿ. ಕಾಯ್ದೆಯಡಿ ಯಾರೇ ತಪ್ಪು ಮಾಡಿದರೂ ಶಿಕ್ಷಿಸುವಂತಾಗಲಿ ಎಂದು ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.



