ಬೆಂಗಳೂರು: ಬೆಂಗಳೂರು ನಗರದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಕನಕಪುರ ರಸ್ತೆಯ ಚೂಡಹಳ್ಳಿ, ಸೋಮನಹಳ್ಳಿ ಹಾಗೂ ನೆಲಮಂಗಲದ ಸಮೀಪದ ಮೂರು ಸ್ಥಳಗಳನ್ನು ಗುರುತಿಸಿದೆ.
ಈ ಸಂಬಂಧ ಸಮಗ್ರ ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಕೆಎಸ್ಐಐಡಿಸಿ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡ ಈಗಾಗಲೇ ಈ ಸ್ಥಳಗಳ ಪರಿಶೀಲನೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಿದೆ ಎಂದು ಹೇಳಿದರು. ಟೆಂಡರ್ ಮೂಲಕ ಆಯ್ಕೆಯಾಗುವ ಸಲಹಾ ಸಂಸ್ಥೆಯು ಐದು ತಿಂಗಳ ಒಳಗೆ ರಾಜ್ಯ ಸರ್ಕಾರಕ್ಕೆ ಸಮಗ್ರ ಕಾರ್ಯಸಾಧ್ಯತಾ ವರದಿ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕಳೆದ ಐದು ವರ್ಷಗಳಲ್ಲಿ ವಾರ್ಷಿಕ ಕನಿಷ್ಠ 250 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ನಿರ್ವಹಿಸಿರುವ ಹಾಗೂ ಕನಿಷ್ಠ ಐದು ಪ್ರಮುಖ ಯೋಜನೆಗಳಿಗೆ ಸಲಹಾ ವರದಿ ನೀಡಿರುವ ಅನುಭವ ಹೊಂದಿರುವ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಬಹುದು. ಆಯ್ಕೆಯಾಗುವ ಸಂಸ್ಥೆ ಮಳೆ ಪ್ರಮಾಣ, ಭೂಲಕ್ಷಣ, ವಿದ್ಯುತ್, ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆ ಸೇರಿದಂತೆ ಮೂಲಸೌಕರ್ಯಗಳು, ಸುತ್ತಮುತ್ತಲಿನ ಜನಸಂಖ್ಯೆ, ಅಭಿವೃದ್ಧಿ, ಶಬ್ದ ಮಾಲಿನ್ಯ ಮತ್ತು ವಿಮಾನ ನಿಲ್ದಾಣದಿಂದ ಉಂಟಾಗುವ ಪರಿಸರ ಪರಿಣಾಮಗಳನ್ನು ಅಧ್ಯಯನ ಮಾಡಲಿದೆ.
ಇದೇ ವೇಳೆ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬೇಕಾಗುವ ವೆಚ್ಚ, ಅಗತ್ಯ ಭೂಮಿ, ಡಿಜಿಸಿಎ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಪಡೆಯಬೇಕಾದ ಅನುಮೋದನೆಗಳ ವಿವರಗಳು ಕಾರ್ಯಸಾಧ್ಯತಾ ವರದಿಯಲ್ಲಿ ಒಳಗೊಂಡಿರಲಿದೆ. ಹೊಸ ವಿಮಾನ ನಿಲ್ದಾಣದಿಂದ ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಸಂಚಾರದ ಮೇಲೆ ಉಂಟಾಗುವ ಪರಿಣಾಮಗಳನ್ನೂ ಅಧ್ಯಯನ ಮಾಡಲಾಗುತ್ತದೆ.
ವಿಮಾನ ನಿಲ್ದಾಣ ನಿರ್ಮಾಣದ ನಂತರ ಅಗತ್ಯವಿರುವ ರಸ್ತೆ, ಸಂಪರ್ಕ ವ್ಯವಸ್ಥೆ ಸೇರಿದಂತೆ ಇತರೆ ಮೂಲಸೌಕರ್ಯಗಳ ಅಭಿವೃದ್ಧಿ, ಸರಕು ಸಾಗಣೆ ಹಾಗೂ ಪ್ರಯಾಣಿಕ ಸೇವೆಗಳ ಆರ್ಥಿಕ ಸಾಧ್ಯತೆಗಳ ಬಗ್ಗೆಯೂ ಸಲಹಾ ಸಂಸ್ಥೆ ವಿಶ್ಲೇಷಣೆ ನಡೆಸಲಿದೆ.



