ಬೆಂಗಳೂರು:- ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹೆಸರಲ್ಲಿ ಮನೆಗೆ ನುಗ್ಗಿ ಬೆದರಿಸಿ ಹಣ ದರೋಡೆ ಮಾಡಿದ್ದ ಘಟನೆ ಸಂಬಂಧ ನಾಲ್ವರನ್ನು ಬಂಧಿಸುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಲ್ಲಿಕಾರ್ಜುನ್ ಅಲಿಯಾಸ್ ಪಿಎಸ್ಐ ಮಲ್ಲಣ್ಣ, ಪ್ರಮೋದ್, ವಿನಯ್ ಮತ್ತು ಋತ್ವಿಕ್ ಬಂಧಿತರು. ಡಿ. 7ರಂದು ದರೋಡೆ ನಡೆದಿದ್ದು, ಆರೋಪಿ ಮಲ್ಲಿಕಾರ್ಜುನ್ ತಾನು ಪಿಎಸ್ಐ ಎಂದು ಪರಿಚಯಿಸಿಕೊಂಡಿದ್ದ. ತನ್ನ ಸಹಚರರೊಂದಿಗೆ ನವೀನ್ ಎಂಬುವರ ಮನೆಗೆ ನುಗ್ಗಿ ಗಾಂಜಾ ಮಾರಾಟ ಮಾಡುತ್ತಿದ್ದೀರಿ ಎಂದು ಬೆದರಿಸಿದ್ದಾನೆ. ಅಲ್ಲದೆ, ನವೀನ್‌ಗೆ ಲಾಠಿ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ, ಅವರ ಬಳಿಯಿದ್ದ ನಗದು ಮತ್ತು ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿಸಿಕೊಂಡು ಗ್ಯಾಂಗ್ ಪರಾರಿಯಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.
ಬಂಧಿತರಿಂದ 87,000 ರೂ. ನಗದು, ಬ್ಯಾಂಕ್ ಖಾತೆಯಿಂದ 50,000 ಮತ್ತು ಪೊಲೀಸ್ ಸಮವಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಮಲ್ಲಿಕಾರ್ಜುನ್ ಎರಡು ಬಾರಿ ಪಿಎಸ್ಐ ಪರೀಕ್ಷೆಯಲ್ಲಿ ಫೇಲ್ ಆಗಿದ್ದರೂ ಪಿಎಸ್ಐ ಆಗಿದ್ದೇನೆ ಎಂದು ಬಿಲ್ಡಪ್ ಕೊಟ್ಟು ನಕಲಿ ಸಮವಸ್ತ್ರ ಹೊಲಿಸಿಕೊಂಡು ಫೋಟೋಶೂಟ್ ಕೂಡ ಮಾಡಿಸಿದ್ದ ಎಂಬುದು ತನಿಖೆ ವೇಳೆ ಬಯಲಾಗಿದೆ.



