ವಿಜಯಸಾಕ್ಷಿ ಸುದ್ದಿ, ಗದಗ
ಪ್ಲಾಸ್ಟಿಕ್ ವ್ಯಾಪಾರದ ಸೋಗಿನಲ್ಲಿ ಬಂದು ಕಳ್ಳತನಕ್ಕಿಳಿದಿದ್ದ ಇಬ್ಬರು ಅಂತಾರಾಜ್ಯ ಕಳ್ಳಿಯರನ್ನು ಬಂಧಿಸುವಲ್ಲಿ ಬೆಟಗೇರಿ ಬಡಾವಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ದ ಮುಕಂದವಾಡ ಏರಿಯಾ ನಿವಾಸಿಗಳಾದ ಸಂಗೀತಾ ಸುರೇಶ್ ಹಾಗೂ ಶ್ರುತಿ ಅಲಿಯಾಸ್ ಆರತಿ ರಾಮು ಎಂಬವರು ಗದಗನ ಕಳಸಾಪೂರ ರಿಂಗ್ ರೋಡ್ ಬಳಿ ಜೋಪಡಿ ಹಾಕಿಕೊಂಡು ವಾಸವಾಗಿದ್ದವರೇ ಬಂಧಿತ ಕಳ್ಳಿಯರು.
ಕಳೆದ ಆಗಸ್ಟ್ 11 ರಂದು ಗದಗ ಹೊಸ ಬಸ್ ನಿಲ್ದಾಣದಲ್ಲಿ ಕುಮಟಾದ ಸೌಮ್ಯ ಸತೀಶ್ ಎನ್ನುವ ಮಹಿಳೆಯೊಬ್ಬರ ವೆನಿಟಿ ಬ್ಯಾಗ್ ಕಳ್ಳತನವಾಗಿತ್ತು. ಅದರಲ್ಲಿ ಮೂರು ಲಕ್ಷಕ್ಕೂ ಅಧಿಕ ಮೊತ್ತದ ಮಂಗಳಸೂತ್ರ ಸೇರಿದಂತೆ ಚಿನ್ನಾಭರಣಗಳಿದ್ದವು.
ಕಳ್ಳತನವಾದ ಕುರಿತು ಬಡಾವಣೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖಾ ತಂಡ ರಚಿಸಲಾಗಿತ್ತು.
ಮೊನ್ನೆ ಭಾನುವಾರ ಹೊಸ ಬಸ್ ನಿಲ್ದಾಣದಲ್ಲಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ಇಬ್ಬರು ಮಹಿಳೆಯರನ್ನು ವಿಚಾರಿಸಿದಾಗ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ.
ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ, ಬೆಟಗೇರಿ ಠಾಣೆಯ ಸಿಪಿಐ ಬಿ ಜಿ ಸುಬ್ಬಾಪೂರಮಠ ನೇತೃತ್ವದಲ್ಲಿ ಬಡಾವಣೆ ಠಾಣೆಯ ಪಿಎಸ್ಐ ಆರ್ ಆರ್ ಮುಂಡೆವಾಡಗಿ, ಸಿಬ್ಬಂದಿಗಳಾದ ಪರಶುರಾಮ ದೊಡ್ಡಮನಿ, ಆರ್ ಐ ಗುಂಜಳ, ಎಸ್ ಸಿ ಕೊರಡೂರ, ಚಂದ್ರು ದೊಡ್ಡಮನಿ, ಎಸ್ ಎಚ್ ಕಮತರ, ಬಿ ಎಫ್ ಯರಗುಪ್ಪಿ, ಅಶೋಕ ಗದಗ, ಆರ್ ಎಲ್ ಗೋಗೇರಿ, ಜೆ ಆರ್ ಕಮತದ, ಎಲ್ ಎಸ್ ಹೊಸಮನಿ ಈ ಕಾರ್ಯಾಚರಣೆ ನಡೆಸಿ ಇಬ್ಬರ ಕಳ್ಳಿಯರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಸಿಬ್ಬಂದಿಗೆ ಎಸ್ಪಿ ಯತೀಶ್ ಎನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.