‘ಅಖಂಡ 2 ತಾಂಡವಂ’ ಚಿತ್ರ ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಸಾಧನೆ ಮಾಡುತ್ತಿದೆ. ನಂದಮೂರಿ ಬಾಲಕೃಷ್ಣ ಅಭಿನಯದ ಈ ಚಿತ್ರ ಡಿಸೆಂಬರ್ 12ರಂದು ಬಿಡುಗಡೆಯಾಗಿದ್ದು, ಮೊದಲ ಮೂರು ದಿನಗಳಲ್ಲಿ 61 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಬೋಯಪಾಟಿ ಶ್ರೀನು ನಿರ್ದೇಶನದ ಈ ಚಿತ್ರದಲ್ಲಿ ಹಿಂದೂ ಧರ್ಮ, ದೇವರ ಮೇಲಿನ ಭಕ್ತಿ ಮತ್ತು ಸನಾತನ ಧರ್ಮದ ವಿಚಾರಗಳನ್ನು ಪ್ರಮುಖವಾಗಿ ತೋರಿಸಲಾಗಿದೆ. ಈ ಅಂಶಗಳೇ ಚಿತ್ರಕ್ಕೆ ದೊಡ್ಡ ಮಟ್ಟದ ಬೆಂಬಲ ತಂದುಕೊಟ್ಟಿವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಭಿಮಾನಿಗಳ ಜೊತೆಗೆ ಕುಟುಂಬ ಸಮೇತ ಪ್ರೇಕ್ಷಕರು ಮತ್ತು ಮಕ್ಕಳು ಸಹ ಚಿತ್ರಮಂದಿರಗಳಿಗೆ ಆಗಮಿಸುತ್ತಿದ್ದಾರೆ.
ಚಿತ್ರದಲ್ಲಿ ಬಾಲಕೃಷ್ಣ ಬಾಲ ಮುರಳಿ ಕೃಷ್ಣ ಹಾಗೂ ಅಖಂಡ ರುದ್ರ ಸಿಕಂದರ್ ಅಘೋರ ಎಂಬ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಅಘೋರ ಪಾತ್ರದಲ್ಲಿ ಅವರ ನಟನಾ ಕೌಶಲ್ಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸನಾತನ ಧರ್ಮದ ಬಗ್ಗೆ ಅವರು ಹೇಳುವ ಸಂಭಾಷಣೆಗಳು ಹಾಗೂ ಖಳನಾಯಕರನ್ನು ಎದುರಿಸುವ ದೃಶ್ಯಗಳು ಪ್ರೇಕ್ಷಕರನ್ನು ರೋಮಾಂಚನಗೊಳಿಸುತ್ತಿವೆ.
ಹೈದರಾಬಾದ್ನಲ್ಲಿ ನಡೆದ ಚಿತ್ರದ ಸಕ್ಸಸ್ ಮೀಟ್ ವೇಳೆ ನಿರ್ದೇಶಕ ಬೋಯಪಾಟಿ ಶ್ರೀನು ಅಚ್ಚರಿಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದೆಹಲಿಯಲ್ಲಿ ‘ಅಖಂಡ 2’ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಈ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸುವ ಸಾಧ್ಯತೆ ಇದೆ ಎಂಬುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಪ್ರಧಾನಿಯವರು ಚಿತ್ರದ ಬಗ್ಗೆ ಕೇಳಿದ್ದು, ಶೀಘ್ರದಲ್ಲೇ ವೀಕ್ಷಿಸುವ ಆಸಕ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ದಿನಾಂಕವನ್ನು ಇನ್ನೂ ನಿಗದಿಪಡಿಸಲಾಗಿಲ್ಲ. ಪ್ರಧಾನಿ ಅವರ ವೇಳಾಪಟ್ಟಿ ನೋಡಿಕೊಂಡು ಮುಂದಿನ ಘೋಷಣೆ ಮಾಡಲಾಗುವುದು ಎಂದು ಚಿತ್ರತಂಡ ಸ್ಪಷ್ಟಪಡಿಸಿದೆ. ಆರಂಭದಲ್ಲಿ ಬಂದ ನಕಾರಾತ್ಮಕ ವಿಮರ್ಶೆಗಳ ನಡುವೆಯೂ ‘ಅಖಂಡ 2’ ಚಿತ್ರವು ನಿರ್ಮಾಪಕರಿಗೆ ದೊಡ್ಡ ಲಾಭ ತಂದುಕೊಡುವ ನಿರೀಕ್ಷೆಯಲ್ಲಿದೆ.



