ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ‘ವಾರಣಾಸಿ’ ಸಿನಿಮಾದಲ್ಲಿ ಕನ್ನಡದ ಖ್ಯಾತ ನಟ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ಈ ಚಿತ್ರಕ್ಕೆ ನಾಯಕನಾಗಿ ಮಹೇಶ್ ಬಾಬು ಅಭಿನಯಿಸುತ್ತಿದ್ದು, ಸಿನಿಮಾ 2027ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
‘ವಾರಣಾಸಿ’ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದು, ಮಲಯಾಳಂ ಚಿತ್ರರಂಗದ ನಟ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅದ್ದೂರಿ ಕಾರ್ಯಕ್ರಮದ ಮೂಲಕ ‘ವಾರಣಾಸಿ’ ಚಿತ್ರದ ಶೀರ್ಷಿಕೆ ಘೋಷಣೆ ಮಾಡಲಾಗಿತ್ತು.
ಚಿತ್ರದ ಪಾತ್ರವರ್ಗದ ಕುರಿತು ತಂಡ ಮೌನ ವಹಿಸಿದ್ದರೂ, ಈಗ ಹೊರಬರುತ್ತಿರುವ ಮಾಹಿತಿಯಂತೆ ಪ್ರಕಾಶ್ ರೈ ಅವರು ಮಹೇಶ್ ಬಾಬು ಅವರ ತಂದೆ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಪಾತ್ರಕ್ಕಾಗಿ ಈ ಹಿಂದೆ ನಟ ನಾನಾ ಪಾಟೇಕರ್ ಅವರೊಂದಿಗೆ ಮಾತುಕತೆ ನಡೆದಿತ್ತಾದರೂ, ಅವರು ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿಲ್ಲದ ಕಾರಣ ಪ್ರಕಾಶ್ ರೈ ಅವರಿಗೆ ಅವಕಾಶ ನೀಡಲಾಗಿದೆ ಎನ್ನಲಾಗಿದೆ.
ರಾಜಮೌಳಿ ಮತ್ತು ಪ್ರಕಾಶ್ ರೈ ನಡುವೆ ಹಳೆಯ ಬಾಂಧವ್ಯವಿದ್ದು, ಈ ಮೊದಲು ‘ವಿಕ್ರಮಾರ್ಕುಡು’ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಮತ್ತೆ ಈ ಜೋಡಿ ಒಂದೇ ಚಿತ್ರದಲ್ಲಿ ಸೇರಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.



