ಬೆಂಗಳೂರು: ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಬಂದಿರುವುದನ್ನು ಕಂಡು ಭಯಗೊಂಡ ಯುವತಿಯೊಬ್ಬರು ಹೋಟೆಲ್ನ ನಾಲ್ಕನೇ ಮಹಡಿಯಿಂದ ಹಾರಿ ಕೆಳಗೆ ಬಿದ್ದಿರುವ ಘಟನೆ ನಗರದ ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಪೊಲೀಸರು ಲಂಚ ಕೇಳಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಹೆಚ್ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯ ಖಾಸಗಿ ಹೋಟೆಲ್ಗೆ ಕಳೆದ ಶನಿವಾರ ರಾತ್ರಿ ನಾಲ್ವರು ಯುವತಿಯರು ಮತ್ತು ನಾಲ್ವರು ಯುವಕರು ಆಗಮಿಸಿ ನಾಲ್ಕು ಪ್ರತ್ಯೇಕ ಕೊಠಡಿಗಳನ್ನು ಬುಕ್ ಮಾಡಿಕೊಂಡಿದ್ದರು. ಎಲ್ಲರೂ ಸೇರಿ ಮದ್ಯಪಾನ ಮಾಡಿ ಪಾರ್ಟಿ ನಡೆಸಿದ್ದು, ಬೆಳಗಿನ ಜಾವದವರೆಗೂ ಗದ್ದಲ ಮುಂದುವರಿದಿತ್ತು. ಇದರಿಂದ ಅಸಮಾಧಾನಗೊಂಡ ಸ್ಥಳೀಯರು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಮೇರೆಗೆ ಹೋಟೆಲ್ಗೆ ಆಗಮಿಸಿದ ಇಬ್ಬರು ಪೊಲೀಸರು ಕೊಠಡಿಯ ಬಾಗಿಲು ತಟ್ಟಿದ್ದಾರೆ. ಈ ವೇಳೆ ಭಯಗೊಂಡ ಯುವತಿ ವೈಷ್ಣವಿ ತಾನು ಉಳಿದುಕೊಂಡಿದ್ದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಹಾರಿ ಬಿದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಇನ್ನೂ, ಪೊಲೀಸರು ಕೊಠಡಿಗೆ ಪ್ರವೇಶಿಸಿದ ಬಳಿಕ ಅಲ್ಲಿದ್ದವರನ್ನು ಬೆದರಿಸಿ, ಪ್ರಕರಣ ದಾಖಲಿಸಿ ಬಂಧಿಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಕೇಸ್ ತಪ್ಪಿಸಿಕೊಳ್ಳಲು ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ವರ್ಗಾಯಿಸಲು ಯುವಕರು ಮುಂದಾದರೂ, ಪೊಲೀಸರು ಆನ್ಲೈನ್ ಪಾವತಿ ನಿರಾಕರಿಸಿ ನಗದು ನೀಡುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಬ್ಬ ಯುವಕ ಎಟಿಎಂಗೆ ಹಣ ತರಲು ಹೊರಟ ಸಂದರ್ಭದಲ್ಲಿ, ಪೊಲೀಸರ ಬೆದರಿಕೆಗೆ ಹೆದರಿ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪಾರ್ಟಿಯಲ್ಲಿ ಭಾಗವಹಿಸಿದ್ದವರು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಹೋಟೆಲ್ನ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ ಎಂದು ಹೋಟೆಲ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.



