ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಸ್ಕೂಲ್ ಚಂದನದಲ್ಲಿ 3 ದಿನಗಳ ಕಾಲ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಎಜ್ಯುಕೇಶನ ಫೌಂಡೇಶನ್, ಜವಾಹರಲಾಲ್ ನೆಹರು ಉನ್ನತ ಸಂಶೋಧನಾ ಕೇಂದ್ರ ಹಾಗೂ ಸ್ಕೂಲ್ ಚಂದನ ಶಾಲೆಯ ಸಹಯೋಗದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮದ ದಶಮಾನೋತ್ಸವ ಕಾರ್ಯಕ್ರಮದ 2ನೇ ದಿನವಾದ ರವಿವಾರ ವಿದ್ಯಾರ್ಥಿಗಳ ಸಂದೇಹ ನಿವಾರಣೆಗೆ ವಿಜ್ಞಾನಿಗಳ ಪಾಠ, ಪ್ರಯೋಗಗಳ ಮುಖಾಂತರ ತಿಳುವಳಿಕೆ ನೀಡುವ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ಹಿರಿಯ ವಿಜ್ಞಾನಿಗಳು ಉತ್ಸಾಹದಿಂದ ವಿಜ್ಞಾನದ ವಿಷಯಗಳು ಸುಲಲಿತ ಎನ್ನುವ ರೀತಿಯಲ್ಲಿ ಹೇಳಿ ಕೊಟ್ಟರು. ಕರ್ನಾಟಕ ಸರಕಾರ ಉನ್ನತ ಶಿಕ್ಷಣ ಅಕಾಡೆಮಿ ಮಾಜಿ ನಿರ್ದೇಶಕ, ಹಿರಿಯ ವಿಜ್ಞಾನಿ ಡಾ. ಎಸ್.ಎಂ. ಶಿವಪ್ರಸಾದ ವಿಜ್ಞಾನದ ಮಹತ್ವವನ್ನು ವಿವರಿಸಿದರು. ಮಕ್ಕಳೊಂದಿಗೆ ಬೆರತು ಪಾಠ ಮಾಡಿದ ಅವರು, ವಿಜ್ಞಾನದ ಎಲ್ಲ ವಿಷಯಗಳಲ್ಲಿ ಆಸಕ್ತಿಯಿಂದ ಕಲಿತರೆ ಯಾವುದೂ ಅಸಾಧ್ಯವಲ್ಲ ಎಂದು ನಿತ್ಯ ಜೀವನದ ವಿಜ್ಞಾನ, ಅನ್ವೇಷಣೆಗಳು, ನಿರಂತರ ಕಲಿಕೆ, ಜ್ಞಾನದ ಮಹತ್ವ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಕಥೆಗಳ ಮೂಲಕ ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಟಿ. ಈಶ್ವರ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಚಂದನ ಶಾಲೆಯಲ್ಲದೆ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯುಕ್ತವಾಗಿದ್ದು, 10 ವರ್ಷಗಳಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ಜರುಗುತ್ತಿರುವದಕ್ಕೆ ಭಾರತರತ್ನ ಡಾ. ಸಿ.ಎನ್.ಆರ್. ರಾವ್ ಹಾಗೂ ಡಾ. ಇಂದುಮತಿ ರಾವ್ ಅವರ ಆಶೀರ್ವಾದ ಹಾಗೂ ಜವಾಹರಲಾಲ್ ನೆಹರು ಉನ್ನತ ಸಂಶೋಧನೆ ಕೇಂದ್ರದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ನೀಡುವ ವಿಶೇಷ ಜ್ಞಾನ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಒಲವು ಮೂಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.
ನಿರ್ದೇಶಕಿ ಗಿರಿಜಾ ಈಶ್ವರ, ಚಂದನ್ ಈಶ್ವರ, ಪ್ರಾಚಾರ್ಯ ಆರ್.ಜಿ. ಬಾವಾನವರ ಹಾಗೂ ಶಿಕ್ಷಕರು ಹಾಜರಿದ್ದರು.
ವಿಜ್ಞಾನಿ ಡಾ. ವಿನಾಯಕ ಪತ್ತಾರ ಮಕ್ಕಳಿಗೆ ಪ್ರಯೋಗಗಳ ಮೂಲಕ ವಿಜ್ಞಾನ ಎಂದರೇನು ಎನ್ನುವದನ್ನು ಪ್ರಾಯೋಗಿಕವಾಗಿ ವಿವರಿಸಿದರು. ಸೂರ್ಯ ಮತ್ತು ಗ್ರಹಗಳ ಬಗ್ಗೆ, ಚಂದ್ರಯಾನ, ಭೂಮಿಯ ಗುರುತ್ವಾಕರ್ಷಣೆ ಬಲ ಮತ್ತು ಬ್ರಹ್ಮಾಂಡ, ಅಂತರಿಕ್ಷ ಪ್ರಯಾಣ, ನಕ್ಷತ್ರ ಪುಂಜಗಳು, ಗ್ಯಾಲಕ್ಸಿ ಬಗ್ಗೆ ವಿಸ್ತಾರವಾಗಿ ಮಕ್ಕಳಿಗೆ ವಿವರಿಸಿದರು. ಪ್ರೊ. ವಿದ್ಯಾಧಿರಾಜ್ ಬೆಳಕು, ಬೆಳಕಿನ ವೇಗ, ಗಾಳಿ, ಗಾಳಿಯ ವೇಗ, ಶಬ್ದದ ವೇಗದ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿದರು. ಮತ್ತೋರ್ವ ವಿಜ್ಞಾನಿ ಡಾ. ಪ್ರತಾಪ ವೈಷ್ಣೋಯಿ, ಭೌತಶಾಸ್ತ್ರದ ತರಗತಿಗಳನ್ನು ಪ್ರಾಯೋಗಿಕವಾಗಿ ಎಲ್ಲ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.



