ಉಡುಪಿ:- ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಪಡುಕರೆಯಲ್ಲಿ ಸ್ನೇಹಿತರ ನಡುವೆ ನಡೆದ ಕ್ಷುಲ್ಲಕ ಜಗಳ ಭೀಕರ ಕೊಲೆಯಲ್ಲಿ ಅಂತ್ಯಗೊಂಡಿದೆ.
ಶಬರಿಮಲೆ ಯಾತ್ರೆ ಮುಗಿಸಿ ಮರಳಿದ ಖುಷಿಯಲ್ಲಿ ಸ್ನೇಹಿತರು ಡಿಸೆಂಬರ್ 14ರಂದು ಸೇರಿ ಎಣ್ಣೆ ಪಾರ್ಟಿ ನಡೆಸಿದ್ದು, ಬಳಿಕ ಒಟ್ಟಿಗೆ ಬಿರಿಯಾನಿ ಊಟ ಮಾಡುವ ವೇಳೆ ಮಾತಿನ ಚಕಮಕಿ ಉಂಟಾಗಿದೆ. ಜಗಳ ತಾರಕಕ್ಕೇರಿದ ಪರಿಣಾಮ ದರ್ಶನ್ ಹಾಗೂ ಕೌಶಿಕ್ ಸೇರಿದಂತೆ ಕೆಲವರು ಆಕ್ಸಿಸ್ ಬ್ಯಾಂಕ್ ಉದ್ಯೋಗಿ ಸಂತೋಷ್ ಪೂಜಾರಿ (30) ಮೇಲೆ ಹಲ್ಲೆ ನಡೆಸಿದ್ದು, ಕುತ್ತಿಗೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿದ್ದ ನಂತರ ಸಂತೋಷ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಸ್ನೇಹಿತರ ನಡುವಿನ ಜಗಳವೇ ಪ್ರಾಣಾಪಾಯಕ್ಕೆ ಕಾರಣವಾದುದು ಸಾರ್ವಜನಿಕರಲ್ಲಿ ಆತಂಕ ಮತ್ತು ಆಘಾತ ಮೂಡಿಸಿದೆ.



