ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ಅವಳಿ ನಗರದ ಸ್ವಚ್ಛತೆ ಹಾಗೂ ಸುಂದರೀಕರಣಕ್ಕೆ ನಗರಸಭೆಯೊಂದಿಗೆ ಸರ್ವರೂ ಸಹಕರಿಸಬೇಕೆಂದು ನಗರಸಭೆಯ ಪೌರಾಯುಕ್ತ ರಾಜಾರಾಮ್ ಪವಾರ ಮನವಿ ಮಾಡಿಕೊಂಡರು.
ಅವರು ರವಿವಾರ ಗದುಗಿನ ಪಂಚಾಕ್ಷರಿ ನಗರದ ವಿವೇಕ ವೇದಿಕೆಯ ಪ್ರಥಮ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ನಗರ ಮತ್ತು ನಾಗರಿಕತೆ ಬೆಳೆದಂತೆ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ನಗರಸಭೆಯ ಆಡಳಿತ, ಸಿಬ್ಬಂದಿ ವರ್ಗ ಹಗಲಿರುಳು ಶ್ರಮಿಸುತ್ತಿದೆ. ಇದರೊಟ್ಟಿಗೆ ಪ್ರಜ್ಞಾವಂತ ನಾಗರಿಕರೂ ಸಹ ಅವಳಿ ನಗರದ ಸ್ವಚ್ಛತೆ ಹಾಗೂ ಸುಂದರವಾಗಿ ಕಾಣುವಲ್ಲಿ ನಗರಸಭೆಯೊಂದಿಗೆ ಸಹಕರಿಸಬೇಕು ಎಂದರು.
ಮನೆ, ಹೋಟೇಲ್, ಖಾನಾವಳಿಯಿಂದ ಬರುವ ತ್ಯಾಜ್ಯದಲ್ಲಿ ಒಣ ಕಸ, ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ವಾರ್ಡ್ನಲ್ಲಿ ಸಂಚರಿಸುವ ನಗರಸಭೆಯ ಕಸ ಸಾಗಣೆಯ ವಾಹನಕ್ಕೆ ಕೊಡಬೇಕು. ಮನೆಯ ಅಂಗಳದ ಮುಂದೆ ಅವಕಾಶವಿದ್ದವರು ನೆಲದಲ್ಲಿ ಸುಮಾರು 4-5 ಅಡಿ ಆಳದಲ್ಲಿ ಪಿವಿಸಿ ಪೈಪ್ ಹಾಕಿ ಅದರಲ್ಲಿ ಕಸ ಹಾಕುತ್ತ ಬರಬೇಕು. ತಿಂಗಳ ಬಳಿಕ ಕಸ ಗೊಬ್ಬರವಾಗಿ ಪರಿವರ್ತನೆಯಾಗುತ್ತದೆ. ಅದನ್ನು ತೆಗೆದು ಗಿಡಗಳಿಗೆ ಹಾಕುವ ಪರಿಪಾಠ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿ, ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ ಮಾತನಾಡಿ, ನಾವು ನಮ್ಮ ಮನೆಯನ್ನು ಚೊಕ್ಕಟವಾಗಿ ಇಟ್ಟುಕೊಳ್ಳಲು ಕಾಳಜಿ ತೆಗೆದುಕೊಳ್ಳುವಂತೆಯೇ ನಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನೂ ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುವದು ಪ್ರಜ್ಞಾವಂತಿಕೆಯ ಲಕ್ಷಣವಾಗಿದೆ. ಅಂತಹ ಕಾರ್ಯಕ್ಕೆ ಅಣಿಗೊಂಡಿರುವ ವಿವೇಕ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.
ನಗರಸಭೆ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಮಾತನಾಡಿ, ನಗರಸಭೆಯಿಂದ ಈ ವಾರ್ಡಿನ ಸಾರ್ವಜನಿಕರಿಗೆ ಒದಗಿಸಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ. ಇನ್ನೂ ಕೆಲಸಗಳು, ಬೇಡಿಕೆಗಳು ಇದ್ದಲ್ಲಿ ಅವುಗಳನ್ನು ಕ್ರಮೇಣ ಈಡೇರಿಸಲಾಗುವದು. ಮಾಡಿದ ಕೆಲಸದ ಬಗ್ಗೆ ಸಂತೃಪ್ತಿ ಇದೆ, ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವೆ ಎಂದರು.
ಇನ್ನೋರ್ವ ಅತಿಥಿ ಸೋಮಪ್ಪ ರೊಟ್ಟಿ ಮಾತನಾಡಿ, ಈ ಲೇಔಟ್ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಸುಶಿಕ್ಷಿತರನ್ನು ಹೊಂದಿರುವ ಈ ಪ್ರದೇಶದ ಸ್ವಚ್ಛ ಮತ್ತು ಸುಂದರವಾಗಿ ಕಾಣುವಂತೆ ನೋಡಿಕೊಳ್ಳುವದು ಎಲ್ಲರ ಜವಾಬ್ದಾರಿ ಎಂದರು.
ವೇದಿಕೆಯ ಮೇಲೆ ನಿವೃತ್ತ ಪಶುವೈದ್ಯ ಡಾ. ಎಚ್.ಡಿ. ಹೊಸಮನಿ, ವಾಲಿಶೆಟ್ಟರ, ಶಿರೂರ ಅಶೋಕ ಉಪಸ್ಥಿತರಿದ್ದರು. ಸುಶೀಲಾ ಮತ್ತು ಕವಿತಾ ಶಿವನಗೌಡರ ಪ್ರಾರ್ಥಿಸಿದರು, ಕಾರ್ಯದರ್ಶಿ ಎಂ.ಡಿ. ವಡವಿ ಸ್ವಾಗತಿಸಿದರು, ವ್ಹಿ.ಬಿ. ಗಡದರ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಂ.ಎನ್. ಹುಬ್ಬಳ್ಳಿ ವರದಿ ವಾಚಿಸಿದರು, ಎಫ್.ಎಸ್. ಸಿಂಧಗಿ ಹಾಗೂ ಎಸ್.ಬಿ. ಸಜ್ಜನರ ಸಂಘಟನೆ ಕುರಿತು ಮಾತನಾಡಿದರು. ಯು.ಎಸ್. ನಿಪ್ಪಾಣಿಕರ ನಿರೂಪಿಸಿದರು. ಕೊನೆಗೆ ಎಸ್.ಸಿ. ಪೊಲೀಸ್ಪಾಟೀಲ ವಂದಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕ ವೇದಿಕೆಯ ಅಧ್ಯಕ್ಷ ಪಿ.ಎ. ಕುಲಕರ್ಣಿ ಮಾತನಾಡಿ, ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ವೇದಿಕೆಯ ಸರ್ವ ಪದಾಧಿಕಾರಿಗಳು, ಸದಸ್ಯರು ಕಂಕಣಬದ್ಧರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಬರಲಿರುವ ದಿನಗಳಲ್ಲಿ ವೇದಿಕೆಯಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ವೈಚಾರಿಕ ಕಾರ್ಯಕ್ರಮಗಳನ್ನು ರೂಪಿಸಲಾಗುವದು. ವಿಶೇಷವಾಗಿ ಮಹಿಳಾ ಸಂಘಟನೆಯನ್ನು ಹುಟ್ಟುಹಾಕುವ ಉದ್ದೇಶ ಹೊಂದಲಾಗಿದೆ. ನಗರಸಭೆಯಿಂದ ಸುಂದರವಾದ ಉದ್ಯಾನ ನಿರ್ಮಾಣಗೊಳ್ಳಲಿದ್ದು, ಎಲ್ಲರೂ ಸಂಘಟನೆಯಲ್ಲಿ ಒಂದಾಗಿ ಎಂದರು.



