ನಟ ದರ್ಶನ್ ಅವರ ಬೇಲ್ ರದ್ದಾದ ಅವಧಿಯಲ್ಲಿ ಕುಟುಂಬ ಎದುರಿಸಿದ ಮಾನಸಿಕ ಒತ್ತಡದ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಬಹಿರಂಗವಾಗಿ ಮಾತನಾಡಿದ್ದಾರೆ. ಆ ದಿನಗಳು ತಮ್ಮ ಜೀವನದ ಅತ್ಯಂತ ಕಠಿಣ ಕ್ಷಣಗಳಾಗಿದ್ದವು ಎಂದು ಅವರು ಹೇಳಿದ್ದಾರೆ.
ಡಿ ಕಂಪನಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಆ ದಿನದ ಕಠಿಣ ಕ್ಷಣಗಳನ್ನು ವಿವರಿಸಿದ್ದಾರೆ. ಆ ದಿನ ದರ್ಶನ್ ಕುದುರೆ ತರಲು ಹೊರಗಡೆ ಹೋಗಿದ್ದರು. ಆ ವೇಳೆಯಲ್ಲೇ ಬೇಲ್ ಕ್ಯಾನ್ಸಲ್ ಆಗಿರುವ ವಿಷಯ ತಿಳಿದುಬಂದಿತು. ಆ ವಿಷಯವನ್ನು ದರ್ಶನ್ ಅವರಿಗೆ ಹೇಗೆ ಹೇಳಬೇಕು ಎಂಬ ಗೊಂದಲ ಮತ್ತು ಆತಂಕ ನನಗೆ ಶುರುವಾಯಿತು ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
ವಿಷಯ ತಿಳಿದ ಬಳಿಕ ಸುಮಾರು 15 ನಿಮಿಷ ಯಾವುದೇ ಮಾತು ಆಡದೆ ನಾನು ಹಾಗೇ ಕುಳಿತಿದ್ದೆ. ಕೊನೆಗೆ ಧೈರ್ಯ ಮಾಡಿಕೊಂಡು ಬೇಲ್ ರದ್ದಾಗಿದೆ ಎಂದು ಹೇಳಿದೆ. ಅದಕ್ಕೆ ದರ್ಶನ್ ಯಾವುದೇ ಆತಂಕ ತೋರಿಸದೇ, “ಹೌದಾ? ಹಾಗಾದ್ರೆ ಬಟ್ಟೆ ಪ್ಯಾಕ್ ಮಾಡು, ವಿಜು ಬರ್ತಾ ಇದ್ದೇನೆ” ಎಂದು ಒಂದೇ ಮಾತು ಹೇಳಿದರು ಎಂದು ವಿಜಯಲಕ್ಷ್ಮಿ ನೆನಪಿಸಿಕೊಂಡಿದ್ದಾರೆ.
ನಮ್ಮ ಮನೆಯಲ್ಲಿ ಕನ್ನಡ ನ್ಯೂಸ್ ಚಾನೆಲ್ ಹಾಕುವುದೇ ಇಲ್ಲ. ಹೀಗಾಗಿ ಮಗ ವಿನೀಶ್‌ಗೆ ಈ ವಿಚಾರ ಮೊದಲಿಗೆ ಗೊತ್ತಿರಲಿಲ್ಲ. ಆದರೆ, ಸ್ನೇಹಿತರಿಂದಲೇ ಎಲ್ಲಾ ಮಾಹಿತಿ ತಿಳಿದುಕೊಂಡು “ಅಪ್ಪ ಅರೆಸ್ಟ್ ಆಗ್ತಾರಾ?” ಎಂದು ನನ್ನ ಬಳಿ ಬಂದು ಕೇಳಿದ್ದಾನೆ ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ. ಹೇಗೋ ಅವನಿಗೆ ಸಮಾಧಾನ ಮಾಡಿದೆ ಎಂದು ಹೇಳಿದ್ದಾರೆ.
ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇರುವುದು ಎಲ್ಲರಿಗೂ ಗೊತ್ತಿದೆ. ಆಗಲೂ ಅವರು ಔಷಧಿ ತೆಗೆದುಕೊಳ್ಳುತ್ತಿದ್ದರು, ಈಗಲೂ ಪ್ರತಿದಿನ ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ನಿಯಮಿತ ಬೇಲ್ ಸಿಕ್ಕಾಗ ಕೆಲವರು ಇದು ನಾಟಕ, ಬೇಲ್‌ಗಾಗಿ ಮಾಡಿದ ಡ್ರಾಮಾ ಎಂದು ಟೀಕೆ ಮಾಡಿದ್ದರು. ಆದರೆ, ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವ ಯೋಜನೆ ಇದ್ದದ್ದು ನಿಜ ಎಂದು ದರ್ಶನ್ ಹೇಳಿದ್ದ ಮಾತನ್ನು ವಿಜಯಲಕ್ಷ್ಮಿ ನೆನಪಿಸಿಕೊಂಡಿದ್ದಾರೆ.
ಬೇಲ್ ವಿಚಾರ ದರ್ಶನ್‌ಗೆ ತುಂಬಾ ಟೆನ್ಷನ್ ನೀಡಿತ್ತು. ದಿನ ಕಳೆದಂತೆ ಅವರು ಮೌನವಾಗುತ್ತಿದ್ದರು. ಆದರೂ ಆ ಸಂಕಷ್ಟದ ಸಮಯವನ್ನು ಹ್ಯಾಂಡಲ್ ಮಾಡಿದ್ದೇವೆ ಎಂದು ವಿಜಯಲಕ್ಷ್ಮಿ ದರ್ಶನ್ ಹೇಳಿದ್ದಾರೆ.



