ಈ ವರ್ಷದ ಅತಿ ಯಶಸ್ವಿ ಚಿತ್ರಗಳಲ್ಲಿ ಒಂದಾಗಿ ‘ಸು ಫ್ರಮ್ ಸೋ’ ಸಿನಿಮಾ 100 ಕೋಟಿ ರೂಪಾಯಿ ಕ್ಲಬ್ ಸೇರಿ ದಾಖಲೆ ಬರೆದಿದೆ. ಆ ಚಿತ್ರದಲ್ಲಿ ಕಥಾ ನಾಯಕ ಜೆಪಿ ತುಮ್ಮಿನಾಡು ಸೀರೆ ಉಟ್ಟು ಕಾಣಿಸಿಕೊಂಡ ದೃಶ್ಯ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಅದೇ ಮಾದರಿಯ ವಿಭಿನ್ನ ಅವತಾರದಲ್ಲಿ ಕನ್ನಡದ ಖ್ಯಾತ ನಟ ಶಿವರಾಜ್ಕುಮಾರ್ ‘45’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಟ್ರೇಲರ್ ಬಿಡುಗಡೆಯೊಂದಿಗೆ ಸಾಕಷ್ಟು ಗಮನ ಸೆಳೆದಿದೆ. ಇಡೀ ಟ್ರೇಲರ್ನಲ್ಲೇ ಈ ದೃಶ್ಯವೇ ಹೈಲೈಟ್ ಆಗಿದೆ.
‘45’ ಸಿನಿಮಾ ಕುರಿತು ಮೊದಲಿನಿಂದಲೂ ದೊಡ್ಡ ನಿರೀಕ್ಷೆ ಇತ್ತು. ಈ ಚಿತ್ರದ ಮೂಲಕ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ನಿರ್ದೇಶಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಗೆಲುವಿನ ಸುಳಿವು ನೀಡಿದ್ದಾರೆ ಎನ್ನುವಂತಿದೆ. ಟ್ರೇಲರ್ ನೋಡಿದವರಿಗೆ ಇದು ಹುಟ್ಟು ಮತ್ತು ಸಾವಿನ ನಡುವಿನ ಜೀವನದ ಕಥೆ ಎನ್ನುವುದು ಸ್ಪಷ್ಟವಾಗುತ್ತದೆ.
ಮೊದಲು ಯೋಜನೆಯಂತೆ ಆಗಸ್ಟ್ ತಿಂಗಳಲ್ಲೇ ‘45’ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಗ್ರಾಫಿಕ್ಸ್ ಕೆಲಸ ವಿಳಂಬವಾದ ಕಾರಣ ರಿಲೀಸ್ ಮುಂದೂಡಲಾಯಿತು. ಇದೀಗ ಟ್ರೇಲರ್ನಲ್ಲಿ ಅದ್ದೂರಿ ಗ್ರಾಫಿಕ್ಸ್ ಸ್ಪಷ್ಟವಾಗಿ ಕಾಣುತ್ತಿದ್ದು, ವಿಳಂಬಕ್ಕೆ ಕಾರಣವೇನೆಂದು ಅರ್ಥವಾಗುತ್ತದೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.
ಟ್ರೇಲರ್ನಲ್ಲಿ ರಾಜ್ ಬಿ ಶೆಟ್ಟಿ, ಶಿವರಾಜ್ಕುಮಾರ್ ಹಾಗೂ ಉಪೇಂದ್ರ ಅವರ ಪಾತ್ರಗಳು ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿವೆ. ಸಮಾಧಿಯ ಮೇಲೆ ಹುಟ್ಟಿದ ದಿನಾಂಕ ಹಾಗೂ ಸಾಯುವ ದಿನಾಂಕ ಬರೆದು, ಮಧ್ಯೆ ಇರುವ ಸಣ್ಣ ಗೆರೆನೇ ಜೀವನ ಎಂದು ಉಪೇಂದ್ರ ಹೇಳುವ ಡೈಲಾಗ್ ಪ್ರೇಕ್ಷಕರ ಮನಸ್ಸಿಗೆ ತಟ್ಟುತ್ತದೆ.
ಟ್ರೇಲರ್ ಕೊನೆಯಲ್ಲಿ ಶಿವರಾಜ್ಕುಮಾರ್ ತಾಳುವ ಸೀರೆ ಅವತಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗಾಗಲೇ ‘ಮಾರ್ಕ್’ ಸಿನಿಮಾ ಟ್ರೇಲರ್ ಕೂಡ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಅದು ಕೂಡ ಡಿಸೆಂಬರ್ 25ಕ್ಕೆ ಬಿಡುಗಡೆಯಾಗುತ್ತಿದೆ. ಆ ದಿನ ‘45’ ಸಿನಿಮಾ ಕೂಡ ಟ್ರೇಲರ್ ಮೂಲಕ ನಿರ್ಮಿಸಿರುವ ಕುತೂಹಲವನ್ನು ತೆರೆ ಮೇಲೆ ಹೇಗೆ ತೋರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.



