ವಿಜಯಸಾಕ್ಷಿ ಸುದ್ದಿ, ನರಗುಂದ
ತಾಲೂಕಿನ ಕೊಣ್ಣೂರು ಬಳಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೃದ್ಧನೋರ್ವ ಮಲಪ್ರಭಾ ನದಿಯಲ್ಲಿ ಸಿಲುಕಿಕೊಂಡು, ಸುಮಾರು ಮೂರು ಗಂಟೆಗಳ ಕಾಲ ಪರದಾಡಿದ ಘಟನೆ ಜರುಗಿದೆ.
ಕೊಣ್ಣೂರು ನಿವಾಸಿ ಬಸಪ್ಪ ತಳವಾರ (60) ನದಿಯಲ್ಲಿ ಸಿಲುಕಿಕೊಂಡಿದ್ದ ವೃದ್ಧ. ಗ್ರಾಮದ ಹೊರವಲಯದಲ್ಲಿರುವ ಮಲಪ್ರಭಾ ನದಿಗೆ ಸ್ನಾನಕ್ಕೆಂದು ತೆರಳಿದ್ದು, ನದಿಯ ದಂಡೆಯಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾಗ ಏಕಾಏಕಿ ನದಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ.
ಸ್ನಾನ ಮಾಡಲೆಂದು ಕುಳಿತ ಸ್ಥಳ ನಡುಗಡ್ಡೆಯಾಗಿ ಮಾರ್ಪಟ್ಟು ಎರಡೂ ಬದಿಗೆ ನೀರು ರಭಸವಾಗಿ ಹರಿಯಲಾರಂಭಿಸಿದ್ದು, ಗಿಡದ ಪೊದೆಯಲ್ಲಿ ಕುಳಿತು ಸಹಾಯಕ್ಕೆ ಅಂಗಲಾಚಿದ್ದಾನೆ. ನದಿಯ ನೀರಿನ ಮಟ್ಟ ಹೆಚ್ಚಾಗಿ ವೃದ್ಧ ಕುಳಿತ ಪೊದೆಯೂ ನೀರಲ್ಲಿ ಕೊಚ್ಚಿಹೋಗುವ ಭೀತಿ ಆವರಿಸಿ ಕೆಲಹೊತ್ತು ಆಘಾತಕ್ಕೊಳಗಾಗಿದ್ದ.
ಸುದ್ದಿ ತಿಳಿದು ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಅಗ್ನಿಶಾಮಕ ದಳದ ಸಿಬ್ಬಂದಿ, ಗ್ರಾಮಸ್ಥರ ನೆರವಿನೊಂದಿಗೆ ರಕ್ಷಣೆ ಮಾಡಿದ್ದಾರೆ ಎಂದು ಗ್ರಾಮದ ಮುಖಂಡ ಚಂದ್ರಗೌಡ ಪಾಟೀಲ ಮಾಹಿತಿ ನೀಡಿದ್ದಾರೆ.