ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕಾನೂನಿನ ಅರಿವೊಂದೇ ಅಪರಾಧ ತಡೆಗಟ್ಟಲು ಇರುವ ಮಾರ್ಗ. ಅಪರಾಧ ತಡೆಯಲು ಸಾರ್ವಜನಿಕರ ಸಹಕಾರದ ಅವಶ್ಯಕತೆಯಿದ್ದು, ಪೊಲೀಸರೊಂದಿಗೆ ಸಾರ್ವಜನಿಕರು ಕೈಜೋಡಿಸಿದಾಗ ಅಪರಾಧಗಳನ್ನು ಸಾಕಷ್ಟು ಪ್ರಮಾಣದಲ್ಲಿ ನಿಯಂತ್ರಿಸಬಹುದು ಎಂದು ಅಪರಾಧ ವಿಭಾಗದ ಪಿಎಸ್‌ಐ ಟಿ.ಕೆ. ರಾಠೋಡ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಪಟ್ಟಣದ ಬಸ್ ನಿಲ್ದಾಣ ಎದುರು ಆಟೋ ರಿಕ್ಷಾ ಚಾಲಕರಿಗೆ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಇಲಾಖೆಯಿಂದ ಜಾಗೃತಿ ಮೂಡಿಸುವ ಭಿತ್ತಿಪತ್ರ ವಿತರಣೆ ಮಾಡಿ ಮಾತನಾಡುತ್ತಿದ್ದರು.
ಹೆಲ್ಮೆಟ್ ಧರಿಸುವುದು, ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಧರಿಸುವುದು ಎಲ್ಲವೂ ಜೀವ ಉಳಿಸುವ ದಾರಿಗಳೇ ಹೊರತು ಕೇವಲ ಕಾನೂನುಗಳಲ್ಲ. ದಾರಿಯಲ್ಲಿ ಮಕ್ಕಳು ಅಡ್ಡಾಡುವಾಗ, ಶಾಲಾ ಪ್ರದೇಶಗಳಲ್ಲಿ ವಾಹನಗಳನ್ನು ನಿಧಾನವಾಗಿ ಚಲಿಸಿ ಎಂದು ಸಲಹೆ ನೀಡಿದ ಅವರು, ಮನೆಗಳ್ಳತನ, ವಾಹನ ಕಳ್ಳತನ ನಡೆಯುತ್ತಿದ್ದು, ಸಾರ್ವಜನಿಕರು ಮನೆಗಳಿಗೆ ಕೀಲಿ ಹಾಕಿ ಬೇರೆ ಕಡೆ ತೆರಳುವ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅಪರಾಧಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸಿ ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ ತಿಂಗಳನ್ನು ಅಪರಾಧ ತಡೆ ಮಾಸಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಸಾರ್ವಜನಿಕರು ಯಾವುದೇ ಅಪರಾಧವನ್ನು ಕಂಡ ಸಂದರ್ಭದಲ್ಲಿ ಧೈರ್ಯವಾಗಿ ಮುಂದೆ ಬಂದು ಸಾಕ್ಷಿ ಹೇಳಬೇಕು. ಒಂದು ವೇಳೆ ಹೀಗಾಗದಿದ್ದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿತಸ್ಥರು ತಪ್ಪಿಸಿಕೊಂಡು ಮತ್ತೆ ಮತ್ತೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಎಎಸ್‌ಐ ವೈ.ಸಿ. ದೊಡ್ಡಮನಿ, ಸಿಬ್ಬಂದಿಗಳಾದ ಅಪ್ಪಣ್ಣ ರಾಠೋಡ, ಪಿ.ಎಮ್. ತೋರಾಥ, ವೀರನಗೌಡ ಪಾಟೀಲ, ಆಟೋ ರಿಕ್ಷಾ ಮಾಲೀಕರು-ಚಾಲಕರು ಇದ್ದರು.



