ಮಂಡ್ಯ: ಮುಂದಿನ ಸದೃಢ ಭಾರತ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದಾಗಿದ್ದು, ಅವರಿಗೆ ಮಠಗಳು ದಿಕ್ಕು ತೋರಿಸುವ ಪ್ರೇರಣಾ ಕೇಂದ್ರಗಳಾಗಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದ ಸುತ್ತೂರು ಮಹಾಸಂಸ್ಥಾನ ಮಠದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತ್ಯುತ್ಸವಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಧ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಯುಗಯುಗಾಂತರಗಳಿಂದ ಸಂತರು ತಮ್ಮ ಜ್ಞಾನ, ಕರುಣೆ ಮತ್ತು ತ್ಯಾಗದ ಮೂಲಕ ಮಾನವೀಯ ಮೌಲ್ಯಗಳನ್ನು ಜೀವಂತವಾಗಿಟ್ಟಿದ್ದಾರೆ ಎಂದು ಹೇಳಿದರು.
ನಿಜವಾದ ಶ್ರೇಷ್ಠತೆ ಅಧಿಕಾರ ಅಥವಾ ಸಂಪತ್ತಿನಲ್ಲಿ ಅಲ್ಲ, ಸೇವೆ, ತ್ಯಾಗ ಮತ್ತು ಆಧ್ಯಾತ್ಮಿಕ ಶಕ್ತಿಯಲ್ಲಿದೆ ಎಂಬುದನ್ನು ಸಂತರ ಜೀವನ ನಮಗೆ ಕಲಿಸುತ್ತದೆ. ಅಂತಹ ಶ್ರೇಷ್ಠ ಸಂತರ ಸಾಲಿನಲ್ಲಿ ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮೀಜಿ ಸಮಾಜಕ್ಕೆ ಬೆಳಕು ಮತ್ತು ಸ್ಫೂರ್ತಿಯ ದೀಪವಾಗಿದ್ದಾರೆ ಎಂದು ರಾಷ್ಟ್ರಪತಿ ಶ್ಲಾಘಿಸಿದರು.
ಸುತ್ತೂರು ಮಠದ ಮಾರ್ಗದರ್ಶನದಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠವು ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ದೇಶದ ಪ್ರಮುಖ ಸಂಸ್ಥೆಗಳಲ್ಲೊಂದು ಆಗಿ ಬೆಳೆದಿದೆ. ಯುವಮನಸ್ಸುಗಳ ರೂಪಿಕೆ, ಆರೋಗ್ಯ ಸೇವೆ, ಮಹಿಳಾ ಸಬಲೀಕರಣ, ಗ್ರಾಮೀಣ ಅಭಿವೃದ್ಧಿ ಮತ್ತು ಸಂಸ್ಕೃತಿ ಸಂರಕ್ಷಣೆಯಂತಹ ಕ್ಷೇತ್ರಗಳಲ್ಲಿ ಮಠದ ಸೇವೆ ಪ್ರಶಂಸನೀಯವಾಗಿದೆ ಎಂದು ಹೇಳಿದರು.
ವೇಗವಾಗಿ ಬದಲಾಗುತ್ತಿರುವ ಹಾಗೂ ಅನಿಶ್ಚಿತತೆಯ ಯುಗದಲ್ಲಿ ಸಾಮಾಜಿಕ ಸಾಮರಸ್ಯ, ನೈತಿಕ ನಾಯಕತ್ವ, ಯುವ ಸಬಲೀಕರಣ ಮತ್ತು ಆಂತರಿಕ ಸ್ಥೈರ್ಯ ಬೆಳೆಸಲು ಆಧ್ಯಾತ್ಮಿಕ ಮಾರ್ಗದರ್ಶನ ಅಗತ್ಯವಿದೆ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರು. 2047ರ ವಿಕ್ಷಿತ್ ಭಾರತದ ಗುರಿಯತ್ತ ಸಾಗುವಾಗ ತಂತ್ರಜ್ಞಾನ ಮತ್ತು ಮೌಲ್ಯಗಳ ಸಮನ್ವಯ ಅಗತ್ಯವಾಗಿದೆ. ನೈತಿಕತೆಯೊಂದಿಗೆ ಆಧುನಿಕ ಶಿಕ್ಷಣ, ಪರಿಸರ ಜವಾಬ್ದಾರಿಯೊಂದಿಗೆ ನವೀನತೆ, ಸಾಮಾಜಿಕ ಸೇರ್ಪಡೆಯೊಂದಿಗೆ ಆರ್ಥಿಕ ಬೆಳವಣಿಗೆ ಹಾಗೂ ಸಹಾನುಭೂತಿಯೊಂದಿಗೆ ಪ್ರಗತಿ ಸಾಧಿಸುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈ ರಾಷ್ಟ್ರೀಯ ಪ್ರಯತ್ನದಲ್ಲಿ ಸುತ್ತೂರು ಮಠದಂತಹ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಬಹುದೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.



