ರಿಷಬ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ನಡುವಿನ ಸ್ನೇಹಕ್ಕೆ ಬಿರುಕು ಬಿದ್ದಿದೆ ಎಂಬ ಆರೋಪಗಳನ್ನು ರಾಜ್ ಬಿ ಶೆಟ್ಟಿ ತಳ್ಳಿ ಹಾಕಿದ್ದಾರೆ. ‘45’ ಸಿನಿಮಾದ ಟ್ರೇಲರ್ ಕುರಿತು ಮಾತನಾಡುವ ವೇಳೆ ರಿಷಬ್ ಶೆಟ್ಟಿ ಅವರು ಉಪೇಂದ್ರ ಮತ್ತು ಶಿವರಾಜ್ ಕುಮಾರ್ ಹೆಸರುಗಳನ್ನು ಉಲ್ಲೇಖಿಸಿದ್ದರೂ, ರಾಜ್ ಹೆಸರು ಹೇಳದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ ಬಿ ಶೆಟ್ಟಿ, “ಇದು ದೊಡ್ಡ ವಿಷಯವೇ ಅಲ್ಲ. ನಾವು ಈಗ ಒಟ್ಟಿಗೆ ಕೆಲಸ ಮಾಡಬೇಕೆಂಬ ಅಗತ್ಯವೂ ಇಲ್ಲ. ಎಲ್ಲರೂ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡಿದರೆ ಚಿತ್ರರಂಗಕ್ಕೆ ಹೆಚ್ಚು ಲಾಭ” ಎಂದು ಹೇಳಿದ್ದಾರೆ. ಮುಂದುವರಿದು, “ಅವರಿಗೆ ನನ್ನ ಅಗತ್ಯ ಬಂದರೆ ನಾನು ಹೋಗಿ ಕೆಲಸ ಮಾಡುತ್ತೇನೆ. ನನ್ನ ಸಿನಿಮಾಗೆ ಅವರ ಸಹಾಯ ಬೇಕಾದರೆ ನಾನು ಕೇಳುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ರಕ್ಷಿತ್ ಶೆಟ್ಟಿ ‘ಸು ಫ್ರಮ್ ಸೋ’ ಸಿನಿಮಾವನ್ನು ಇನ್ನೂ ನೋಡಿಲ್ಲ ಎಂಬ ವಿಚಾರದ ಮೇಲೂ ರಾಜ್ ಪ್ರತಿಕ್ರಿಯಿಸಿದ್ದು, “ಕಮಿಟ್ಮೆಂಟ್ ಕಾರಣಕ್ಕೆ ಅವರು ಸಿನಿಮಾ ನೋಡಿಲ್ಲ. ಹಾಗಂತ ನಮ್ಮ ಸ್ನೇಹದಲ್ಲಿ ಏನಾದರೂ ಬದಲಾವಣೆ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಒಟ್ಟಾರೆ, ರಿಷಬ್ ಶೆಟ್ಟಿ ಯಾರನ್ನೂ ದೂರ ತಳ್ಳುವ ವ್ಯಕ್ತಿ ಅಲ್ಲ ಎಂಬುದನ್ನು ಪುನರುಚ್ಚರಿಸಿದ ರಾಜ್ ಬಿ ಶೆಟ್ಟಿ, ವದಂತಿಗಳಿಗೆ ಅಂತ್ಯ ಹಾಕಿದ್ದಾರೆ.



