ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿ ಭೌತಿಕ ಶ್ರೀಮಂತಿಕೆ ಹೆಚ್ಚುತ್ತಿದೆ. ಆದರೆ, ಸಂಸ್ಕಾರ, ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ ಎಂದು ಕರ್ಕಿಯ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಶ್ರೀ ಶಂಕರಭಾರತಿ ಸಮುದಾಯ ಭವನದಲ್ಲಿ ತಾಲೂಕಾ ದೈವಜ್ಞ ಬ್ರಾಹ್ಮಣ ಸಮಾಜ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡ `ದೈವಜ್ಞ ದರ್ಶನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿನ ದಿನಗಳಲ್ಲಿ ಬಡತನ, ಕಷ್ಟಗಳ ಮಧ್ಯೆ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳೊಂದಿಗೆ ಬದುಕುತ್ತಾ ಶಾಂತಿ, ನೆಮ್ಮದಿ ಕಂಡುಕೊಳ್ಳುತ್ತಿದ್ದರು. ಇಂದು ಆ ವಾತಾವರಣಕ್ಕಾಗಿ ಹಂಬಲಿಸಬೇಕಾಗಿದೆ. ನಮ್ಮ ವೈಯಕ್ತಿಕ ಬದುಕಿನ ನಡುವೆಯೂ ಪ್ರತಿಯೊಬ್ಬರೂ ಸಮಾಜದ ಶ್ರೇಯೋಭಿವೃದ್ಧಿ ಮತ್ತು ಧರ್ಮದ ಕಾರ್ಯಕ್ಕಾಗಿ ಕೈ ಜೋಡಿಸಬೇಕು. ದೈವಜ್ಞ ದರ್ಶನ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯುತ್ತಿದ್ದು, ದೈವಜ್ಞ ಸಮಾಜ ಬಾಂಧವರು ಶ್ರೀಮಠದ ಉತ್ತರಾಧಿಕಾರಿಯಾದ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮಿಗಳ ಪರಿಚಯ ಮತ್ತು ಸಮಾಜ ಸಂಘಟನೆ ಮಾಡಬೇಕು ಎಂದರು ನುಡಿದರು.
ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಭಕ್ತಿಯಿಂದ ಭಗವಂತನ ಆರಾಧನೆ, ಸ್ಮರಣೆ, ಧ್ಯಾನ ಮಾಡಿದರೆ ಸಾಕು ಭಗವಂತ ಎಲ್ಲರಿಗೂ ಒಲಿಯುತ್ತಾನೆ. ಇನ್ನೊಬ್ಬರನ್ನು ವಂಚಿಸಿ ತಂದ ಹಣದಿಂದ ದೇವರಿಗೆ ಅರ್ಪಿಸಿದರೆ ದೇವರು ಒಲಿಯುವುದಿಲ್ಲ. ಸಮಾಜದ ಪ್ರತಿ ಕುಟುಂಬದ ಮಕ್ಕಳು ಸಂಸ್ಕಾರವಂತರಾಗಬೇಕು. ನಾವಿಂದು ಮೂಲ ಆಚಾರ, ವಿಚಾರ, ಸಂಸ್ಕಾರದಿಂದ ದೂರವಾಗುತ್ತಿದ್ದೇವೆ ಎಂದು ನುಡಿದರು.
ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ವೇರ್ಣೆಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹನುಮಂತ ಪುತಳೀಕರ, ಮಂಗಳೂರಿನ ಗಜೇಂದ್ರ ಶೇಠ, ಮಾರುತಿ ವೇರ್ಣೆಕರ, ವೆಂಕಟೇಶ ರಾಯಕರ, ರವಿರಾಜ ವೇರ್ಣೆಕರ, ಕೆ. ಸುಧಾಕರ ಶೇಟ್, ರಾಜ್ಯ ಆಯುಷ್ ಇಲಾಖೆ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ. ರಾಜು ಶೇಟ್, ಅರುಣ ವೇರ್ಣೆಕರ, ಗಣೇಶ ಕುರಡೇಕರ, ಮೋಹನ ವೇರ್ಣೆಕರ, ಸುರೇಶ ವೇರ್ಣೆಕರ, ಚಂದ್ರಕಾಂತ ಶೇಟ್, ಈಶ್ವರ ಪುತಳಿಕರ, ನಾರಾಯಣ, ರಾಘವೇಂದ್ರ ಶೇಟ್, ವಾದಿರಾಜ ಶೇಟ್, ಮೋಹನ್ ಕುರುಡೇಕರ, ಸುರೇಶ ಕುರುಡೇಕರ, ಸುರೇಶ ವೇರ್ಣೆಕರ, ವೆಂಕಟೇಶ ವೇರ್ಣೆಕರ, ಪ್ರಶಾಂತ ಕುಡಾಳಕರ, ಸುಜಾತಾ ಶೇಟ್, ವೆಂಕಟೇಶ ದೈವಜ್ಞ, ಪ್ರಕಾಶ ರೇವಣಕರ, ವಿಷ್ಣು ಕುರುಡೇಕರ ಸೇರಿದಂತೆ ಅನೇಕರಿದ್ದರು. ಪ್ರೇಮ ಶೇಟ್ ನಿರೂಪಿಸಿದರು.
ಹೆಸರಿಂದ ಮಾತ್ರ ಶ್ರೇಷ್ಠನಾದರೆ ಸಾಲದು. ನಮ್ಮ ಕರ್ತವ್ಯದಲ್ಲಿ, ನಮ್ಮ ವಿಚಾರದಲ್ಲಿ, ನಮ್ಮ ಮನಸ್ಥಿತಿಯಲ್ಲಿ ಕೂಡ ಶ್ರೇಷ್ಠರಾಗಬೇಕು. ಲಕ್ಷ್ಮೇಶ್ವರ ಭಾಗದಲ್ಲಿ ದೈವಜ್ಞ ಸಮಾಜ ಬಾಂಧವರು ಇಂತಹ ಧಾರ್ಮಿಕ ಕಾರ್ಯಗಳಿಗೆ ಒಗ್ಗಟ್ಟಾಗಿ, ಅಚ್ಚುಕಟ್ಟಾಗಿ ಸಹಕಾರ ನೀಡಿ ಕಾರ್ಯಕ್ರಮ ಮಾಡುತ್ತಿರುವದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಕಿರಿಯ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ನುಡಿದರು.



