ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ, ಉಪಹಾರ ಗೃಹ, ಅನೆಕ್ಸ್ ಕಟ್ಟಡ, ಅತಿಥಿ ಗೃಹ ಹಾಗೂ ಬಾಲಕಿಯರ ವಸತಿ ನಿಲಯ ಕಟ್ಟಡಗಳ ಕಾಮಗಾರಿಗಳನ್ನು 37 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಎಲ್ಲಾ ಕಾಮಗಾರಿಗಳನ್ನು 11 ತಿಂಗಳ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು. ಸ್ವಂತ ಸಂಪನ್ಮೂಲಗಳ ಬಳಕೆಯಿಂದ ಅಭಿವೃದ್ಧಿಗೆ ಕಾನೂನು ವಿಶ್ವವಿದ್ಯಾಲಯ ಮುಂದಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬುಧವಾರ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿವಿಧ ಕಟ್ಟಡಗಳ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕಾಮಗಾರಿಗಳನ್ನು ನೀಡಿದ ಕಾಲಾವಕಾಶದಲ್ಲಿ ಮುಕ್ತಾಯಗೊಳಿಸುವ ಸಾಮರ್ಥ್ಯ ಏಜೆನ್ಸಿಗಳಿಗೆ ಇದೆ. ಕಾಮಗಾರಿಗಳನ್ನು ಕೈಗೊಂಡ ಅಧಿಕಾರಿಗಳಿಗೆ ಯಾವುದೇ ರೀತಿಯ ತೊಂದರೆಗಳು, ಸಮಸ್ಯೆಗಳು ಉಂಟಾದರೆ ಕೂಡಲೇ ನನಗೆ ಅಥವಾ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತರಬೇಕು. ಕಾಮಗಾರಿಯಲ್ಲಿ ವಿನಾಕಾರಣ ವಿಳಂಬವಾಗಬಾರದು ಎಂದು ಅವರು ಸೂಚಿಸಿದರು.
ವಿಶ್ವವಿದ್ಯಾಲಯಕ್ಕೆ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಸ್ವಂತ ಸಂಪನ್ಮೂಲಗಳ ಸ್ವಾವಲಂಬನೆ ನಿಧಿಯಿಂದ 80 ಕೋಟಿ ರೂ. ವೆಚ್ಚದ ಕಾಮಗಾರಿಗಳನ್ನು ಕೈಗೊಂಡರೂ ಸಹ ಸುಮಾರು 50ರಿಂದ 60 ಕೋಟಿ ರೂ. ಉಳಿಯಲಿದೆ. ಆದರ್ಶ ವಿಶ್ವವಿದ್ಯಾಲಯ ಮಾಡುವ ಗುರಿ ಹೊಂದಲಾಗಿದೆ. ಜಾಗದ ಬಗ್ಗೆ ಹಲವಾರು ರೀತಿಯ ಗೊಂದಲಗಳು ಉಂಟಾಗಿದ್ದು, ಪಾಲಿಕೆಯ ನಿಯೋಗ ಮುಖ್ಯಮಂತ್ರಿಗಳು, ಸಭಾಪತಿಗಳನ್ನು ಭೇಟಿ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ವಿಶ್ವವಿದ್ಯಾಲಯದ ಆಡಳಿತ ಭವನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಎರಡು ಸ್ಲಾಬ್ ಕಾಮಗಾರಿಗಳು ಪೂರ್ಣಗೊಂಡಿವೆ. ಮಾಹಿತಿ ಕೊರತೆಯಿಂದ 20 ದಿನಗಳ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿಯಲ್ಲಿ ವಿಳಂಬವಾದ ಅವಧಿಯನ್ನು ಸರಿಪಡಿಸಿಕೊಂಡು ಮೇ ತಿಂಗಳಲ್ಲಿ ಕಟ್ಟಡವನ್ನು ಮುಕ್ತಾಯಗೊಳಿಸಬೇಕು. ಜೂನ್ ತಿಂಗಳಲ್ಲಿ ಶೈಕ್ಷಣಿಕ ವರ್ಷವನ್ನು ಆಡಳಿತ ಭವನದಿಂದ ಆರಂಭಿಸಲು ಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಮಹಾಪೌರ ಜ್ಯೋತಿ ಪಾಟೀಲ, ಪಾಲಿಕೆಯ ವಿರೋಧ ಪಕ್ಷದ ನಾಯಕ ಇಮ್ರಾನ್ ಎಲಿಗಾರ, ಪಾಲಿಕೆ ಸದಸ್ಯೆ ನೀಲ್ಲಮ್ಮ ಯಲ್ಲಪ್ಪ ಅರವಾಳದ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಭವಾನಿ ನೇರಳೆ, ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಗೀತಾ ಕೌಲಗಿ, ಮೌಲ್ಯಮಾಪನ ಕುಲಸಚಿವೆ ಪ್ರೊ. ರತ್ನಾ ಆರ್. ಭರಮಗೌಡರ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿ.ಡಿ. ಕಾಮರಡ್ಡಿ, ಚಿದಾನಂದ ಪಾಟೀಲ, ಸ್ಥಾನಿಕ ಅಭಿಯಂತರರಾದ ಅಶ್ವಥನಾರಾಯಣ ಎಂ. ಹೊನಕೇರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಎಂ. ಕುಲಕರ್ಣಿ ಸೇರಿದಂತೆ ಸಿಂಡಿಕೇಟ್ ಸದಸ್ಯರು, ವಿದ್ಯಾ ಪರಿಷತ್ತಿನ ಸದಸ್ಯರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜು ಸ್ವಾಗತಿಸಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ರೂ. 37 ಕೋಟಿ ವೆಚ್ಚದಲ್ಲಿ ಗ್ರಂಥಾಲಯ, ಉಪಹಾರ ಗೃಹ, ಅನೆಕ್ಸ್ ಕಟ್ಟಡ, ಅತಿಥಿ ಗೃಹ ಹಾಗೂ ಬಾಲಕಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ರೂ. 10 ಕೋಟಿ ವೆಚ್ಚದಲ್ಲಿ ಗ್ರಂಥಾಲಯ ಕಟ್ಟಡವನ್ನು ನಿರ್ಮಿಸಲಾಗುತ್ತದೆ. ಒಟ್ಟಾರೆಯಾಗಿ 2531.05 ಚ.ಮೀ. ವಿಸ್ತೀರ್ಣದಲ್ಲಿ ಸುಮಾರು 460 ಆಸನಗಳ ಸಾಮರ್ಥ್ಯದ ಗ್ರಂಥಾಲಯ ನಿರ್ಮಾಣವಾಗಲಿದೆ. ರೂ. 5 ಕೋಟಿ ವೆಚ್ಚದಲ್ಲಿ ಉಪಹಾರ ಗೃಹ ಕಟ್ಟಡ ನಿರ್ಮಾಣವಾಗಲಿದೆ. 993.89 ಚ.ಮೀ. ವಿಸ್ತೀರ್ಣದ ನೆಲಮಹಡಿಯ ಉಪಹಾರ ಗೃಹ ಇದಾಗಿದ್ದು, ಸುಮಾರು 236 ಆಸನಗಳ ಸಾಮರ್ಥ್ಯವನ್ನು ಹೊಂದಿರಲಿದೆ. ಸುಮಾರು ರೂ. 2 ಕೋಟಿ ವೆಚ್ಚದಲ್ಲಿ ಬಾಲಕಿಯರ ವಸತಿ ನಿಲಯ ಕಟ್ಟಡದ ಕಾಮಗಾರಿ ನಡೆಯಲಿದೆ. ನೆಲಮಹಡಿಯ 567.19 ಚ.ಮೀ. ವಿಸ್ತೀರ್ಣದಲ್ಲಿ 10 ಕೊಠಡಿಗಳನ್ನು ಒಳಗೊಂಡ ವಸತಿ ನಿಲಯ ನಿರ್ಮಾಣವಾಗಲಿದೆ.



