ವಿಜಯಸಾಕ್ಷಿ ಸುದ್ದಿ, ಗದಗ: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯದ ಸಮಿತಿಯ ಪದಾಧಿಕಾರಿಗಳು ಸ್ಲಂ ನಿವಾಸಿಗಳ ವಸತಿ ಹಕ್ಕು ಕಾಯ್ದೆ ಜಾರಿಗೆ ಆಗ್ರಹಿಸಿ, ಖಾಸಗಿ ಮಾಲಿಕತ್ವದಲ್ಲಿರುವ ಕೊಳಗೇರಿ ಪ್ರದೇಶಗಳನ್ನು ತಕ್ಷಣ ಘೋಷಣೆ ಮಾಡಲು ಹಾಗೂ ವಿವಿಧ ಹಕ್ಕೊತ್ತಾಯಗಳಿಗೆ ಒತ್ತಾಯಿಸಿ ಸುವರ್ಣಸೌಧದಲ್ಲಿ ವಸತಿ ಸಚಿವರಾದ ಜಮೀರ್ ಅಹ್ಮದಖಾನ ಅವರಿಗೆ ಘೇರಾವು ಹಾಕಿ ಮನವಿಯನ್ನು ಸಲ್ಲಿಸಿದರು.
ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಮಾತನಾಡಿ, ರಾಜ್ಯಾದ್ಯಂತ ಬಿಬಿಎಂಪಿ, ಮಹಾನಗರಪಾಲಿಕೆ ಹಾಗೂ ನಗರಸಭೆ ವ್ಯಾಪ್ತಿಯ ಖಾಸಗಿ ಒಡೆತನದಲ್ಲಿರುವ ಸುಮಾರು 709ಕ್ಕೂ ಹೆಚ್ಚು ಸ್ಲಂಗಳಲ್ಲಿ ಅಂದಾಜು 1.8 ಲಕ್ಷ ಕುಟುಂಬಗಳು ಕಳೆದ 50 ವರ್ಷಗಳಿಂದ ಯಾವುದೇ ನಾಗರಿಕ ಸೌಲಭ್ಯಗಳಿಲ್ಲದೇ ವಾಸವಾಗಿದ್ದಾರೆ. ಸರ್ಕಾರದ ಜನವಿರೋಧಿ ಸುತ್ತೋಲೆಯಿಂದ ರಾಜ್ಯದ ಸ್ಲಂ ನಿವಾಸಿಗಳು ಹಕ್ಕುಪತ್ರ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ತಕ್ಷಣವೇ ಈ ಜನವಿರೋಧಿ ಸುತ್ತೋಲೆಯನ್ನು ಹಿಂಪಡೆದು ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನ-ಕರ್ನಾಟಕ ರಾಜ್ಯ ಸಂಚಾಲಕ ಹಾಗೂ ಗದಗ ಜಿಲ್ಲಾ ಸ್ಲಂ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ, ಸಾವಿತ್ರಿಬಾ ಪುಲೆ ಮಹಿಳಾ ಸಮಿತಿ ಸಂಚಾಲಕಿ ಚಂದ್ರಮ್ಮ, ವಿಭಾಗೀಯ ಸಂಚಾಲಕರಾದ ಜನಾರ್ಧನ ಹಳ್ಳಿಬೆಂಚಿ, ಶೋಭಾ ಕಮತರ, ರೇಣುಕಾ ಯಲ್ಲಮ್ಮ, ಅರುಣ, ವೆಂಕಮ್ಮ, ಸುಧಾ, ರೇಣುಕಾ ಸರಡಗಿ, ಅಕ್ರಮ ಮಸಾಳಕರ, ಫಕ್ಕಿರಪ್ಪ ತಳವಾರ, ಮಂಜುಬಾಯಿ, ಹನುಮಂತ ಕಟ್ಟಿಮನಿ, ಅಶೋಕ ಕುಸಬಿ, ಮೆಹಬೂಬಸಾಬ ಬಳ್ಳಾರಿ, ಖಾಜಾಸಾಬ ಇಸ್ಮಾಯಿಲನವರ, ಬಾಷಾಸಾಬ ಡಂಬಳ, ಶರಣಪ್ಪ ಸೂಡಿ, ರಿಜ್ವಾನ ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.
ಸಚಿವರು ಮನವಿ ಸ್ವೀಕರಿಸಿ ಮಾತನಾಡಿ, ಖಾಸಗಿ ಮಾಲಿಕತ್ವದಲ್ಲಿರುವ ಸ್ಲಂ ಪ್ರದೇಶಗಳ ಘೋಷಣೆ, ವಸತಿ ಯೋಜನೆಯ ಸಮರ್ಪಕ ಜಾರಿಗಾಗಿ ಹಾಗೂ ವಸತಿ ಹಕ್ಕು ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಕುರಿತು ಚರ್ಚಿಸಲು ಅಧಿವೇಶನ ಮುಗಿದ ನಂತರ ಬೆಂಗಳೂರಿನಲ್ಲಿ ಉನ್ನತಮಟ್ಟದ ಸಭೆಯನ್ನು ಕರೆಯಲಾಗುವುದು ಎಂದು ಭರವಸೆ ನೀಡಿದರು.



