ಬಿಗ್ ಬಾಸ್ ಮನೆಯಲ್ಲಿ ವಿಶೇಷ ಅತಿಥಿಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಪ್ರವೇಶಿಸಿದ್ದು, ಮನೆಯ ವಾತಾವರಣವೇ ಬದಲಾಗಿದೆ. ಸದಾ ಟಾಸ್ಕ್, ವಾಗ್ವಾದ ಮತ್ತು ಉದ್ವಿಗ್ನತೆಯಿಂದ ಕೂಡಿದ್ದ ಮನೆಯಲ್ಲಿ ರವಿಚಂದ್ರನ್ ತಮ್ಮ ಪ್ರೇಮ ಕಥೆಯನ್ನು ತೆರೆದಿಟ್ಟು, ಸ್ಪರ್ಧಿಗಳಿಗೆ ಹೊಸ ಅನುಭವ ನೀಡಿದರು.
ಪ್ರೇಮಲೋಕ ತೆರೆದಿಟ್ಟವರಾಗಿಯೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರವಿಚಂದ್ರನ್, ಕಾಲೇಜು ದಿನಗಳ ಮೊದಲ ಪ್ರೀತಿಯ ನೆನಪುಗಳನ್ನು ಹಂಚಿಕೊಂಡರು. ‘ನಾನಿನ್ನ ಮರೆಯಲಾರೆ’ ಸಿನಿಮಾದ ಬೈಕ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ, ಬೈಕ್ ಸೌಂಡ್‌ಗೆ ತಿರುಗಿ ನೋಡಿದ ಹುಡುಗಿಯೇ ತಮ್ಮ ಮೊದಲ ಪ್ರೀತಿ ಎಂದು ಅವರು ಹೇಳಿದರು. ಆ ಕ್ಷಣವನ್ನು ಇಂದಿಗೂ ಮರೆತಿಲ್ಲ ಎಂದು ರವಿಚಂದ್ರನ್ ಸ್ಪಷ್ಟಪಡಿಸಿದರು.
ಒಂದು ವರ್ಷ ಕಣ್ಣಲ್ಲೇ ಪ್ರೀತಿ ನಡೆದಿದ್ದು, ಆಕೆಗೆ ಪ್ರೀತಿಯನ್ನು ಹೇಳಲು ಸಾಕಷ್ಟು ಸಮಯ ತೆಗೆದುಕೊಂಡೆ ಎಂದರು. ನಂತರ ಕಾರಿನಲ್ಲಿ ಕಾಲೇಜಿಗೆ ಹೋಗಿ ಡ್ರಾಪ್ ಕೊಡಲು ಕೇಳಿದಾಗ ನಿರಾಕರಣೆ ಎದುರಾದ ಕಾರಣ ಒಂದು ವಾರ ಕಾಲೇಜಿಗೆ ಹೋಗದೇ ಇದ್ದೆ ಎಂದು ಹೇಳಿದರು. ಬಳಿಕ ಆ ಹುಡುಗಿಯೇ ಮನೆ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದ ನಂತರ ಇಬ್ಬರ ಮಾತುಕತೆ ಮುಂದುವರಿದಿತು ಎಂಬುದನ್ನೂ ವಿವರಿಸಿದರು.
ಕ್ರೇಜಿಸ್ಟಾರ್ ಅವರ ಈ ಲವ್ ಸ್ಟೋರಿ ಕೇಳಿ ಬಿಗ್ ಬಾಸ್ ಮನೆಯ ಸದಸ್ಯರು ಕುತೂಹಲ ಹಾಗೂ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಈ ಸುಂದರ ಕ್ಷಣಗಳ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



