ಬೆಂಗಳೂರು: ನಮ್ಮ ಮೆಟ್ರೋದ ಯೆಲ್ಲೋ ಲೈನ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ.
ಡ್ರೈವರ್ಲೆಸ್ 7ನೇ ಮೆಟ್ರೋ ರೈಲು ಕೊಲ್ಕತ್ತಾದ ಟಿಟಾಗರ್‌ನಿಂದ ಹೊರಟು ಇಂದು ಸಂಜೆ ಹೆಬ್ಬಗೋಡಿ ಡಿಪೋ ತಲುಪಿದೆ. ಈ ರೈಲು ಜನವರಿಯಿಂದ ವಾಣಿಜ್ಯ ಸಂಚಾರ ಆರಂಭಿಸಲಿದ್ದು, ಆರ್.ವಿ. ರಸ್ತೆ–ಬೊಮ್ಮಸಂದ್ರ ಮಾರ್ಗದಲ್ಲಿ ರೈಲುಗಳ ನಡುವಿನ ಓಡಾಟದ ಅವಧಿ 8–10 ನಿಮಿಷಗಳಿಗೆ ಇಳಿಯಲಿದೆ.
19.15 ಕಿಮೀ ಉದ್ದದ ಯೆಲ್ಲೋ ಲೈನ್‌ನಲ್ಲಿ ಸದ್ಯ ಐದು ರೈಲುಗಳು ಸಂಚರಿಸುತ್ತಿದ್ದು, ಹೊಸ ರೈಲು ಸೇರ್ಪಡೆಯಿಂದ ಸೇವೆ ಮತ್ತಷ್ಟು ಸುಧಾರಣೆಯಾಗಲಿದೆ. ಆಗಸ್ಟ್ 10ರಂದು ಯೆಲ್ಲೋ ಲೈನ್ ಉದ್ಘಾಟನೆಯಾಗಿ, ಆಗಸ್ಟ್ 11ರಿಂದ ವಾಣಿಜ್ಯ ಸಂಚಾರ ಆರಂಭವಾಗಿತ್ತು.
ಇದೇ ವೇಳೆ, ಪಿಂಕ್ ಲೈನ್‌ನಲ್ಲಿ ಸಂಚರಿಸಲಿರುವ ಚಾಲಕರಹಿತ ರೈಲಿನ ಮಾದರಿಯನ್ನು BEML ಬಿಡುಗಡೆ ಮಾಡಿದೆ. ಒಟ್ಟು 23 ಡ್ರೈವರ್ಲೆಸ್ ರೈಲುಗಳಿಗೆ ಆರ್ಡರ್ ನೀಡಲಾಗಿದ್ದು, 2026 ಮೇನಲ್ಲಿ ಕಾಳೇನ ಅಗ್ರಹಾರ–ತಾವರೆಕೆರೆ ನಡುವಿನ 6 ಎಲಿವೇಟೆಡ್ ಸ್ಟೇಷನ್‌ಗಳನ್ನು ತೆರೆಯಲು BMRCL ಸಿದ್ಧತೆ ನಡೆಸಿದೆ. ಬ್ಲ್ಯೂ ಮತ್ತು ಪಿಂಕ್ ಲೈನ್‌ಗಳಿಗಾಗಿ 318 ಸ್ಟ್ಯಾಂಡರ್ಡ್ ಗೇಜ್ ಮೆಟ್ರೋ ಬೋಗಿಗಳನ್ನು BEML ಪೂರೈಸಲಿದೆ.



